ಸೋಮವಾರ
ಕನ್ನಡಪ್ರಭ ವಾರ್ತೆ ಮುನಿರಾಬಾದ್
ಗೌರಿ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ಅಮ್ಮನವರ ದರ್ಶನ ಭಾಗ್ಯ ಪಡೆದರು.ಸೋಮವಾರ ಸಂಜೆಯಿಂದಲೇ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಆಗಮಿಸ ತೊಡಗಿದರು. ಸೋಮವಾರ ರಾತ್ರಿ ಸುಮಾರು 1 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಶ್ರೀ ಹುಲಿಗೆಮ್ಮ ದೇವಸ್ಥಾನ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಕೊರೆಯುವ ಚಳಿಯಲ್ಲಿ ಮಲಗಿದರು. ಬೆಳಗ್ಗೆ ಎದ್ದು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಅಮ್ಮನ ದರ್ಶನವನ್ನು ಪಡೆದರು.
ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸುಮಾರು 1.5 ಲಕ್ಷ ಜನ ಭಕ್ತಾದಿಗಳು ಅಮ್ಮನ ದರ್ಶನವನ್ನು ಪಡೆದರು. ಮಧ್ಯಾಹ್ನ 12 ಗಂಟೆಗೆ ಈ ಸಂಖ್ಯೆ 2 ಲಕ್ಷಕ್ಕೆ ಏರಿತ್ತು. ಮಧ್ಯಾಹ್ನ 3 ಗಂಟೆಗೆ ಅಮ್ಮನ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿತು. ಸಂಜೆಯ ವೇಳೆಗೆ 4 ಲಕ್ಷ ಭಕ್ತರು ಹುಲಿಗೆಮ್ಮನ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.ಟ್ರಾಫಿಕ್ ಜಾಮ್ ಮುಕ್ತ ಗೌರಿ ಹುಣ್ಣಿಮೆ
ಪ್ರತಿ ಹುಣ್ಣಿಮೆಗೆ ಹುಲಿಗೆಮ್ಮ ದೇವಿ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಜನ ಭಕ್ತಾದಿಗಳಿಗೆ ಪದೇ ಪದೇ ರೈಲ್ವೆ ಗೇಟ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಪರದಾಡುತ್ತಿದ್ದರು. ಈಗ ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣದ ನಂತರ ಭಕ್ತಾದಿಗಳಿಗೆ ಯಾವುದೇ ಟ್ರಾಫಿಕ್ ಜಾಮ್ನ ಜಂಜಾಟ ಇಲ್ಲ. ಸಂಚಾರ ವ್ಯವಸ್ಥೆ ಸುಗಮ ಗೊಂಡಿದೆ.ದೇವಸ್ಥಾನದಿಂದ ದಾಸೋಹ ವ್ಯವಸ್ಥೆ:
ಗೌರಿ ಹುಣ್ಣಿಮೆ ಪ್ರಯುಕ್ತ ಅಮ್ಮನ ದರ್ಶನಕ್ಕೆ ಬಂದ ಲಕ್ಷಾಂತರ ಜನ ಭಕ್ತರಿಗಾಗಿ ಹುಲಿಗಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆವರೆಗೆ ದಾಸೋಹ ವ್ಯವಸ್ಥೆಯನ್ನು ಮಾಡಲಾಯಿತು. ಸುಮಾರು 40,000ಕ್ಕೂ ಅಧಿಕ ಭಕ್ತಾದಿಗಳು ಅಮ್ಮನವರ ಪ್ರಸಾದ ಸ್ವೀಕರಿಸಿದರು.ಅಲ್ಲದೆ ಅಮ್ಮನವರ ದರ್ಶನವನ್ನು ಪಡೆಯಲು ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಅವರು ನಿಂತ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹುಲಿಗಮ್ಮ ದೇವಿ ಭಕ್ತರ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ, ಹೊಸಪೇಟೆ ನಗರಗಳಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್ಸುಗಳ ಸೌಕರ್ಯವನ್ನು ಕಲ್ಪಿಸಿಲಾಯಿತು.ಹುಣ್ಣಿಮೆಯಂದು ರಾಜ ಮಾತಂಗಿ ದರ್ಶನಕ್ಕೆ ಅವಕಾಶ-
ಹುಲಿಗಮ್ಮ ದೇವಸ್ಥಾನದ ಆವರಣದೊಳಗೆ ಇರುವ ರಾಜ ಮಾತಂಗಿ ದೇವಸ್ಥಾನಕ್ಕೆ ಕಳೆದು ಹುಣ್ಣಿಮೆ ದಿನದಂದು ಬಂದಂತ ಭಕ್ತಾದಿಗಳಿಗೆ ದರ್ಶನ ಮಾಡಲು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಭಾರಿ ವಿವಾದ ಸೃಷ್ಟಿ ಆಗಿತ್ತು . ರಾಜ ಮಾತಂಗಿ ದೇವಸ್ಥಾನದ ಅರ್ಚಕರು ದೇವಸ್ಥಾನದ ಪ್ರಾಧಿಕಾರದ ಮೇಲೆ ಗಂಭೀರ ಆರೋಪ ಮಾಡಿದರು. ಮಾಧ್ಯಮದಲ್ಲಿ ಇದರ ಬಗ್ಗೆ ವರದಿ ಯಾಯಿತು.ಗೌರಿ ಹುಣ್ಣಿಮೆ ಪ್ರಯುಕ್ತ ದೇವಸ್ಥಾನದ ಪ್ರಾಧಿಕಾರದ ವತಿಯಿಂದ ಶ್ರೀ ಹುಲಿಗಮ್ಮ ದೇವಿ ದರ್ಶನದ ನಂತರ ಭಕ್ತಾದಿಗಳಿಗೆ ರಾಜಮಾತಂಗಿ ದರ್ಶನಕ್ಕೂ ಅನುವು ಮಾಡಿಕೊಡಲಾಯಿತು ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್ ಕನ್ನಡಪ್ರಭಕ್ಕೆ ತಿಳಿಸಿದರು.