ಮಹಿಳೆಯರ ಹಬ್ಬವೆಂದೇ ಹೆಸರಾದ ಗೌರಿ ಹುಣ್ಣಿಮೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಹಬ್ಬದ ಕಳೆ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿ ನಡೆದಿದೆ.

ಸಿದ್ಧತೆಯಲ್ಲಿ ತೊಡಗಿದ ಮಹಿಳೆಯರು । ಗೌರಿದೇವಿಗೆ ವಿಶೇಷ ಪೂಜೆ ಸಲ್ಲಿಕೆ

ಮಹದೇವಪ್ಪ ಎಂ. ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಮಹಿಳೆಯರ ಹಬ್ಬವೆಂದೇ ಹೆಸರಾದ ಗೌರಿ ಹುಣ್ಣಿಮೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಹಬ್ಬದ ಕಳೆ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿ ನಡೆದಿದೆ. ಗೌರಿ ಹುಣ್ಣಿಮೆ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಹಬ್ಬದ ಅಂಗವಾಗಿ ಸಕ್ಕರೆ ಆರತಿ ಹಾಗೂ ವಿವಿಧ ಬಗೆಯ ಗೊಂಬೆಗಳ ಖರೀದಿ ಜೋರಾಗಿದೆ. ಹಬ್ಬದ ಸಿದ್ಧತೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದು, ಮಾರುಕಟ್ಟೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

ಈ ದಿನ ಗೌರಿದೇವಿಗೆ ವಿಶೇಷ ಪೂಜೆ ಸಲ್ಲಿಸುವುದು, ಸಕ್ಕರೆ ಆರತಿ ಬೆಳಗುವುದು, ಸುಮಂಗಲಿಯರು ಪರಸ್ಪರ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತದೆ. ಕುಟುಂಬದ ಸುಖ, ಶಾಂತಿ, ಸಮೃದ್ಧಿ ಹಾಗೂ ಸೌಭಾಗ್ಯಕ್ಕಾಗಿ ಮಹಿಳೆಯರು ಭಕ್ತಿಭಾವದಿಂದ ಗೌರಿದೇವಿಯನ್ನು ಆರಾಧಿಸುತ್ತಾರೆ.

ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಸಕ್ಕರೆ ಆರತಿ ತಟ್ಟೆಗಳು, ಸಕ್ಕರೆ ಗೊಂಬೆಗಳು, ವಿವಿಧ ಆಕರ್ಷಕ ಗೊಂಬೆಗಳು, ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ಬಳೆ, ಕುಂಕುಮ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಹೆಚ್ಚಾಗಿದೆ. ವಿಶೇಷವಾಗಿ ಸಕ್ಕರೆಯಿಂದ ತಯಾರಿಸಿದ ವಿವಿಧ ಆಕಾರದ ಗೊಂಬೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಬಣ್ಣಬಣ್ಣದ ಗೊಂಬೆಗಳು ಮಕ್ಕಳನ್ನು ಆಕರ್ಷಿಸುತ್ತಿದ್ದು, ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ.

ಶಿವನ ಪತ್ನಿಯಾದ ಗೌರಿಯನ್ನು ಪೂಜಿಸಿ ಆರತಿ ಬೆಳಗಿದರೆ ಮಹಿಳೆಯರಿಗೆ ಶುಭವಾಗುತ್ತದೆ ಎಂಬ ನಂಬಿಕೆಯಿಂದ ಈಗಲೂ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳ ಆರತಿ, ದೀಪಗಳೊಂದಿಗೆ ಗೌರಮ್ಮನಿಗೆ ಬೆಳಗುವ ಸಂಪ್ರದಾಯ ಪರಿಪಾಲಿಸುತ್ತಿರುವುದು ಕಾಣಬಹುದಾಗಿದೆ. ಹೆಣ್ಣು ಮಕ್ಕಳು ಶೃಂಗಾರಗೊಂಡು ಹುಣ್ಣಿಮೆಯ ಬೆಳದಿಂಗಳಲ್ಲಿ ಸಾಲು ಸಾಲು ನಿಂತು ಗೌರಮ್ಮನಿಗೆ ಆರತಿ ಮಾಡುತ್ತಾರೆ.

ಈಗಿನ ತಂತ್ರಜ್ಞಾನ ಯುಗದಲ್ಲಿ ಇಂತಹ ಆಚರಣೆ, ಹಬ್ಬಗಳು, ಸಂಪ್ರದಾಯಗಳು ಈಗಲೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ನೋಡಲು ಸಿಗುತ್ತಿರುವುದು ಸೌಭಾಗ್ಯವೇ ಸರಿ ಎನ್ನಬಹುದು. ನ. ೨೪ರಂದು ಗೌರಿ ಹುಣ್ಣಿಮೆ ದಿನದಂದು ರಾತ್ರಿ ಗೌರಿ ಗೌರಿ ಗಾಣಾ ಗೌರಿ, ಮುದ್ದಿನ ಗೌರಿ ಎಂದು ಗೌರಿಯ ಹಾಡುಗಳನ್ನು ಹಾಡುತ್ತಾರೆ. ಹೆಣ್ಣು ಮಕ್ಕಳಿಗೆ, ಸೊಸೆಯಾಗಿ ಬರುವ ಹುಡುಗಿ ಮನೆಯವರಿಗೆ ಸಕ್ಕರೆ ಆರತಿ, ಹೂ ಮಾಲೆ (ದಂಡಿ) ಕಳಿಸುವ ಸಂಪ್ರದಾಯವಿದೆ.

ಕೆಜಿಗೆ ₹೧೫೦ರಿಂದ ೨೦೦ ದರ:

ಶಿರಹಟ್ಟಿ ಪಟ್ಟಣದಲ್ಲಿ ಕೆಜಿಗೆ ₹೧೫೦ರಿಂದ ೨೦೦ ವರೆಗೆ ಸಕ್ಕರೆ ಆರತಿ ಮಾರಾಟವಾಗುತ್ತಿವೆ. ನಿಸರ್ಗದಲ್ಲಿನ ಗಿಡ ಮರಗಳ, ದೇವತೆಗಳ, ಪ್ರಾಣಿ ಪಕ್ಷಿ ಸೇರಿದಂತೆ ಇನ್ನಿತರ ಸುಂದರವಾದ ವಿಶಿಷ್ಟ ವೈವಿಧ್ಯಮಯ ರಂಗುರಂಗಿನ ಸಕ್ಕರೆ ಗೊಂಬೆಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಹಳೆಯ ಸಂಪ್ರದಾಯಗಳು ಈಗ ಫ್ಯಾಶನ್ ಆಗಿ ಪರಿವರ್ತನೆಗೊಳ್ಳುತ್ತಾ ಸಾಗಿರುವುದಂತು ನಿಜ.

ಒಟ್ಟಾರೆ ಗೌರಿ ಹುಣ್ಣಿಮೆ ಸಂಭ್ರಮದಿಂದಾಗಿ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಹೆಚ್ಚಿದ್ದು, ಸಕ್ಕರೆ ಆರತಿ ಹಾಗೂ ಗೊಂಬೆಗಳ ಖರೀದಿ ಭರದಿಂದ ಸಾಗುತ್ತಿದೆ. ಮನೆಮನೆಗಳಲ್ಲಿ ಗೌರಿದೇವಿಯ ಆರಾಧನೆಗೆ ಸಿದ್ಧತೆ ನಡೆದಿದ್ದು, ಹಬ್ಬದ ಸಂಭ್ರಮ ಮನೆಮಾಡಿದೆ.