ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಇದರಂಗವಾಗಿ ನಾಲ್ವರು ಕಲಾವಿದರಿಗೆ ರಂಗ ಸನ್ಮಾನ ಕಾರ್ಯಕ್ರಮ ನಡೆಯಿತು.

ಹಾನಗಲ್ಲ: ಬಾಹ್ಯ ಚಕ್ಷುವಿಲ್ಲದೆ ಅಂತರಂಗದ ಕಣ್ಣಿನಿಂದ ಪಂ. ಪುಟ್ಟರಾಜರು ಹಾಗೂ ಪಂ. ಪಂಚಾಕ್ಷರ ಗವಾಯಿಗಳವರು ಅಂಧ ಅನಾಥರ ಮಕ್ಕಳಿಗೆ ಸಂಗೀತ ಕಲೆಯ ಮೂಲಕ ಬದುಕು ಕಟ್ಟಿಕೊಟ್ಟ ಮಹಾತ್ಮರಾಗಿದ್ದು, ಇದು ಇಡೀ ಜಗತ್ತಿನಲ್ಲೇ ಇತಿಹಾಸ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಎಸ್.ಎಸ್. ಮೂರಮಟ್ಟಿ ಹೇಳಿದರು.

ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿಯ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಇದರಂಗವಾಗಿ ನಾಲ್ವರು ಕಲಾವಿದರಿಗೆ ರಂಗ ಸನ್ಮಾನ, ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಂಗ ಕಲೆಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದೆ ಬರಬೇಕಾದ ಅಗತ್ಯವಿದೆ. ಕಲಾವಿದರನ್ನು ಗುರುತಿಸಿ ಗೌರವಿಸುವ ಅಗತ್ಯವೂ ಈಗಿದೆ. ಕಲೆ ವಿದ್ಯೆಗೆ ವಯಸ್ಸಿನ ಇತಿ ಮಿತಿ ಇಲ್ಲ. ದೊಡ್ಡಾಟ ಪರಂಪರೆ, ನಾಟಕಗಳು ಉಳಿಯಲು ಪ್ರೇಕ್ಷಕರು ಬೆಂಬಲಿಸಬೇಕು. ಶೇಷಗಿರಿ ರಂಗ ಕ್ಷೇತ್ರದ ಸಾಧನೆ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ ಎಂದರು.

ಸಾಹಿತಿ ಡಾ. ಎಂ. ಪ್ರಸನ್ನಕುಮಾರ, ಕಲೆಯ ಉಸಿರಾಟ ಆನಂದದಾಯಕವಾದುದು. ರಂಗಭೂಮಿಯ ಇತಿಹಾಸ ಹೇಳುತ್ತ ಹೋದರೆ ಸಾಲದು. ಅದರ ಭವಿಷ್ಯದ ಬಗೆಗೆ ಯೋಜನೆ-ಯೋಚನೆ ಬೇಕಾಗಿದೆ. ಪ್ರೇಕ್ಷಕರನ್ನು ಸಹಜವಾಗಿಯೇ ಹಿಡಿದಿಟ್ಟುಕೊಳ್ಳುವ ರಂಗ ಕಲೆಯನ್ನು ಮಕ್ಕಳು ಯುವಕರಲ್ಲಿ ಬಿತ್ತಿ ಬೆಳೆಯುವ ಅಗತ್ಯ ಈಗ ಹೆಚ್ಚಿದೆ ಎಂದರು.

ರಂಗಭೂಮಿಯಲ್ಲಿ ನಾವು-ನೀವು ವಿಷಯದ ಕುರಿತು ಮಾತನಾಡಿದ ಯುವ ರಂಗ ನಿರ್ದೇಶಕ ಸಂತೋಷ ಸಂಕೊಳ್ಳಿ, ನಟ, ಪ್ರೇಕ್ಷಕ ಇದ್ದರೆ ಮಾತ್ರ ನಾಟಕ ಉಳಿಯುತ್ತದೆ. ರಂಗಕಲೆ ಅಭಿವ್ಯಕ್ತಿ ಸಮಾಜದ ಕೈಗನ್ನಡಿ. ಬದುಕಿನ ವಿಜ್ಞಾನ ಗಣಿತದಷ್ಟೇ ರಂಗಕಲೆಯೂ ಅತ್ಯಾವಶ್ಯಕ. ಮುಖವಾಡ ಕಳಚಿ ಯೋಚಿಸಿದರೆ ಮಾತ್ರ ಸಮಾಜ ಚೆನ್ನಾಗಿ ಕಾಣಬಲ್ಲದು. ಅದಕ್ಕಾಗಿ ರಂಗ ಕಲೆಯೇ ಅತ್ಯುತ್ತಮ ಸಾಧನ. ನಾವು ಕೂಡ ಬದುಕಿನ ನಾಟಕದಲ್ಲಿ ಒಳ್ಳೆಯ ಪಾತ್ರಧಾರಿಗಳಾಗೋಣ ಎಂದರು.

ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ ಆಶಯ ನುಡಿ ನುಡಿದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಕಾಂತಪ್ಪ ಹಿತ್ತಲಮನಿ, ಶಂಭು ಬಣಕಾರ, ಸಿದ್ದಪ್ಪ ಅಂಬಿಗೇರ, ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆಯ ಸಂಸ್ಥಾಪಕಿ ತುಳಸಮ್ಮ ನಿರೂಪಾದೆಪ್ಪ ಕೆಲೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಕೊಂಚಿಗೇರಿ ರಂಗಕರ್ಮಿ ಅಶೋಕ ಬಡಿಗೇರ, ಹಾನಗಲ್ಲ ತಾಲೂಕು ಕಲಕೇರಿಯ ದೊಡ್ಡಾಟ ಕಲಾವಿದ ನಾಗರಾಜ ಚನ್ನಬಸಪ್ಪ ಪೂಜಾರ, ಉಡುಪಿಯ ರಂಗ ನಟಿ, ನಿರ್ದೇಶಕಿ ರೇವತಿರಾಮ ಕುಂದನಾಡು, ನದಿನೀರಲಗಿಯ ಯುವ ಕಲಾವಿದ ಸೋಮಣ್ಣ ಡಂಬರಮತ್ತೂರ ಅವರಿಗೆ ರಂಗ ಸಮ್ಮಾನ ನೀಡಲಾಯಿತು.

ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳು ಪ್ರಾರ್ಥನೆ ಹಾಡಿದರು. ಜಮೀರ ಪಠಾಣ ಸ್ವಾಗತಿಸಿದರು. ಸಿದ್ದಪ್ಪ ಕೊಂಡೋಜಿ ಕಾರ್ಯಕ್ರಮ ನಿರೂಪಿಸಿದರು.

ಮಲ್ಲಕಂಬ: ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನ ಸಿಂಧೂ ಅಂಧ ವಸತಿ ಶಾಲೆ ಮಕ್ಕಳಿಂದ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಸಭಾಸದರನ್ನು ಅಚ್ಚರಿಗೊಳಿಸಿತು.