ಹಿಂದಿನ ಎಲ್ಲ ವರ್ಷಗಳ ದಾಖಲೆ ಮಹಾದಾಸೋಹದಲ್ಲಿ ಪುಡಿಗುಟ್ಟಿ ಹೊಸ ದಾಖಲೆ ನಿರ್ಮಾಣವಾದವು. ಈ ಜಾತ್ರಾ ಮಹೋತ್ಸವದ ಪರಂಪರೆಯಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ಮೈಸೂರು ಪಾಕ ಸಿದ್ಧ ಮಾಡಿ, ವಿತರಣೆ ಮಾಡಿದ್ದು ದಾಖಲೆಯೇ ಸರಿ

ಸೋಮರಡ್ಡಿ ಅಳವಂಡಿ ಕೊಪ್ಪಳ

ಈ ಬಾರಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹತ್ತು ಹಲವು ದಾಖಲೆ ಮಾಡುತ್ತಲೇ ಲಕ್ಷ ಲಕ್ಷ ಭಕ್ತರು ಬಗೆ ಬಗೆ ಖಾದ್ಯದ ಪ್ರಸಾದದೊಂದಿಗೆ ಮೂರು ದಿನಗಳ ವೇದಿಕೆ ಕಾರ್ಯಕ್ರಮಕ್ಕೆ ವೈಭವದ ತೆರೆ ಕಂಡಿತು.

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಜ.1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿತ್ತು. ನಂತರ ಅವುಗಳ ಸಾಂಗವಾಗಿ ನಡೆದವು. ಜ.5 ರಂದು ನಡೆದ ಜಾತ್ರಾಮಹೋತ್ಸವದಲ್ಲಿ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾದರು.

ಮೇಘಾಲಯದ ರಾಜ್ಯಪಾಲ, ಕೊಪ್ಪಳ ಜಿಲ್ಲೆಯ ವಿಜಯಶಂಕರ ಚಾಲನೆ ನೀಡುವ ಮೂಲಕ ಪ್ರಾರಂಭವಾಗ ಜಾತ್ರಾಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.

ಪುಡಿಗುಟ್ಟಿದ ದಾಖಲೆ: ಹಿಂದಿನ ಎಲ್ಲ ವರ್ಷಗಳ ದಾಖಲೆ ಮಹಾದಾಸೋಹದಲ್ಲಿ ಪುಡಿಗುಟ್ಟಿ ಹೊಸ ದಾಖಲೆ ನಿರ್ಮಾಣವಾದವು. ಈ ಜಾತ್ರಾ ಮಹೋತ್ಸವದ ಪರಂಪರೆಯಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ಮೈಸೂರು ಪಾಕ ಸಿದ್ಧ ಮಾಡಿ, ವಿತರಣೆ ಮಾಡಿದ್ದು ದಾಖಲೆಯೇ ಸರಿ. ಯಾವ ಅಚ್ಚರಿ ಎಂದರೇ ಹತ್ತು ಲಕ್ಷಕ್ಕೂ ಅಧಿಕ ಮೈಸೂರು ಪಾಕ ಕೇವಲ ಎರಡು ದಿನಗಳಲ್ಲಿಯೇ ಖಾಲಿಯಾಗಿವೆ.

35 ಟನ್ ಮಾದಲಿ: ಗೆಳೆಯರ ಬಳಗದವರು ಮಾಡಿಸಿದ್ದ 25 ಟನ್ ಮಾದಲಿಯ ಜತೆಗೆ ಭಕ್ತರು ಹತ್ತು ಕೆಜಿಯಿಂದ ಕ್ವಿಂಟಲ್ ಗಟ್ಟಲೇ ಮಾದಲಿ ತಂದು ನೀಡಿದ್ದಾರೆ. ಇದೆಲ್ಲವನ್ನು ಲೆಕ್ಕ ಹಾಕಿದರೆ ಮಾದಲಿಯೇ ಬರೋಬ್ಬರಿ 35 ಟನ್ ಗೂ ಅಧಿಕ ಸಂಗ್ರಹವಾಗಿದೆ. ಇದರಲ್ಲಿ ಈಗಾಗಲೇ ಶೇ.50 ರಷ್ಟು ಬಳಕೆಯಾಗಿದೆ.

ವೈವಿದ್ಯಮಯ ಪ್ರಸಾದ:ಮಹಾದಾಸೋಹದಲ್ಲಿ ಮೂರು ದಿನ ಸಿಹಿ ಸೇರಿದಂತೆ ರೊಟ್ಟಿ, ಫಲ್ಯ, ಅನ್ನ ಸಾಂಬರ್, ಪುಡಿ ಚಟ್ನಿ, ಕೆಂಪು ಚಟ್ನಿ ಒಳಗೊಂಡು ಪ್ರಸಾದದ ವೈಭವ ಬಣ್ಣಿಸಲು ಅಸಾಧ್ಯ ಎನ್ನುವಂತಾಗಿತ್ತು.

ಜನಮನ ರಂಜನೆ: ರಾಜ್ಯದ ಕಲಾವಿದರಿಂದ ಹಿಡಿದು ಅಂತಾರಾಷ್ಟ್ರೀಯ ಕಲಾವಿದರ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಡಾ.ನಾ.ಸೋಮೇಶ್ವರ ಸಮಾರೋಪ ಭಾಷಣದೊಂದಿಗೆ ವೈಭವದ ತೆರೆ ಎಳೆಯಲಾಯಿತು.

ಲಕ್ಷ ಲಕ್ಷ ಭಕ್ತರು ಸೇರಿದರೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದೇ ಒಂದು ಗಲಾಟೆಯಾಗಿರುವ ಉದಾಹರಣೆ ಇಲ್ಲ, ನುಕುನುಗ್ಗಲು ಇಲ್ಲ. ಅಷ್ಟು ದೊಡ್ಡ ಸಂಖ್ಯೆಯ ಭಕ್ತರು ಸೇರಿದರೂ ಶಾಂತ ಸಮುದ್ರದಂತೆ ಕಂಡು ಬಂದಿತು.

ಸಿಡಿಮದ್ದುಗಳ ಸಂಭ್ರಮ:ಜಾತ್ರಾ ಮಹೋತ್ಸವದ ಎರಡನೇ ದಿನ ಸಿಡಿಮದ್ದುಗಳ ಸಂಭ್ರಮ ಮುಗಿಲುಮುಟ್ಟಿತ್ತು. ಹಸಿರು ಪಟಾಕಿಗಳ ಅಬ್ಬರ ಆಗಾಸದಲ್ಲಿಯೇ ಚಿತ್ತಾರ ಬಿಡಿಸಿದ ಪರಿ ನೋಡುಗರನ್ನು ಸೋಜಿಗಗೊಳಿಸಿತು.

ಸೇರಿದ್ದ ಲಕ್ಷಾಂತರ ಭಕ್ತರು ಸಿಡಿಮದ್ದುಗಳ ಸಂಭ್ರಮ ಕಣ್ತುಂಬಿಕೊಂಡರು, ವೇದಿಕೆಯ ಮೇಲಿದ್ದ ಗಣ್ಯರು ಮತ್ತು ಸ್ವಾಮೀಜಿಗಳು ಸಹ ಪಟಾಕಿ ಸಂಭ್ರಮ ವೀಕ್ಷಣೆ ಮಾಡಿದರು.

ಸುರಕ್ಷಿತವಾಗಿ ಮನೆ ಸೇರಿ: ರಥೋತ್ಸವ ಮುಗಿಯುತ್ತಿದ್ದಂತೆ ಮಾತನಾಡಿದ ಗವಿಶ್ರೀಗಳು, ಎಲ್ಲ ಭಕ್ತರಿಗೂ ಆಶೀರ್ವಾದ ಮಾಡಿ, ನೀವೆಲ್ಲ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ಎನ್ನುವುದು ಎಷ್ಟು ಸಂತೋಷವು ನನಗೆ, ಅದಕ್ಕಿಂತ ಸಂತೋಷವಾಗುವುದು ನೀವೆಲ್ಲ ಸುರಕ್ಷಿತವಾಗಿ ಮನೆ ಸೇರಿದಾಗಲೇ ಎಂದು ಹೇಳಿದರು. ಗಡಿಬಿಡಿ ಮಾಡಿಕೊಳ್ಳದೆ, ಅತ್ಯಂತ ಸಮಾಧಾನದಿಂದ ತೆರಳುವಂತೆ ಮನವಿ ಮಾಡಿದರು.