ಸಾರಾಂಶ
ವಿದ್ಯಾರ್ಥಿ ದೇವರಾಜ ಮೂಲೆಮನಿ 2022-23ನೇ ಸಾಲಿನಲ್ಲಿ ಬಿಎಸ್ಸಿ ಪ್ರವೇಶ ಪಡೆದಿದ್ದ.
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ದೇವರಾಜ್ ಮೂಲಿಮನಿ ಅವರ ಅಂಕ ಪಟ್ಟಿಯಲ್ಲಿ ವಿದ್ಯಾರ್ಥಿ ಭಾವಚಿತ್ರ ಬದಲಿಗೆ ಗವಿಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಪ್ರಕಟವಾಗಿದೆ.
ವಿದ್ಯಾರ್ಥಿ ದೇವರಾಜ ಮೂಲೆಮನಿ 2022-23ನೇ ಸಾಲಿನಲ್ಲಿ ಬಿಎಸ್ಸಿ ಪ್ರವೇಶ ಪಡೆದಿದ್ದ. ವಿದ್ಯಾರ್ಥಿ ಕೋರ್ಸ್ ಪೂರ್ಣಗೊಳಿಸಿದ್ದು, 1ರಿಂದ 4ನೇ ಸೆಮಿಸ್ಟರ್ ಅಂಕಪಟ್ಟಿಗಳನ್ನು ವಿವಿ ನೀಡಿದ್ದು, ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಭಾವಚಿತ್ರ ಬದಲಾಗಿ ಗವಿಶ್ರೀಗಳ ಫೋಟೋ ಪ್ರಕಟಗೊಂಡಿದೆ. ಅಷ್ಟೇ ಅಲ್ಲ; 2ನೇ ಸೆಮಿಸ್ಟರ್‌ನ ಫಲಿತಾಂಶ ಸಹ ಅನುತ್ತೀರ್ಣ ಎಂದು ಪ್ರಕಟಗೊಂಡಿದೆ.ಭಾವಚಿತ್ರ ಬದಲಾವಣೆಗಾಗಿ ವಿದ್ಯಾರ್ಥಿ ಹಾಗೂ ಪೋಷಕರು ವಿವಿಗೆ ಅಲೆದಾಡುವಂತಾಗಿದೆ. ಅಂಕಪಟ್ಟಿ ತಿದ್ದುಪಡಿಗೆ ₹280 ರಂತೆ ₹1120 ಶುಲ್ಕ ಪಾವತಿಸಿದ್ದು, ವಿವಿ ಮಾಡುವ ನಿರ್ಲಕ್ಷ್ಯದಿಂದಾಗಿ ನಾವು ನಿತ್ಯ ಕೊಪ್ಪಳದಿಂದ ಬಳ್ಳಾರಿಗೆ ಓಡಾಡುವಂತಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಬಿಎಸ್ಸಿ ಮೂಲ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿ ಭಾವಚಿತ್ರ ಹಾಗೂ ಫಲಿತಾಂಶ ಸರಿಪಡಿಸಬೇಕು ಎಂದು ವಿದ್ಯಾರ್ಥಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ವಿಶ್ವವಿದ್ಯಾಲಯದ ಯಡವಿಟ್ಟು ಇದೇ ಮೊದಲಲ್ಲ. ಈ ಹಿಂದೆ ಬಿಎಸ್ಸಿಯ ಪ್ರಶ್ನೆಪತ್ರಿಕೆಗಳನ್ನು ತಪ್ಪಾಗಿ ಮುದ್ರಿಸಿ, ವಿದ್ಯಾರ್ಥಿಗಳನ್ನು ಆತಂಕಕ್ಕೆ ಸಿಲುಕಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಯಾರೋ ಮಾಡುವ ತಪ್ಪಿಗೆ ವಿದ್ಯಾರ್ಥಿ-ಪೋಷಕರು ಪರದಾಟಕ್ಕಿಟ್ಟಿರುವ ವಿವಿ ನಡೆ ತೀವ್ರ ಟೀಕೆಗೂ ಗುರಿಯಾಗಿದೆ.ವಿದ್ಯಾರ್ಥಿ ದೇವರಾಜ್ ಮೂಲೆಮನಿ ಅಂಕಪಟ್ಟಿಯಲ್ಲಿ ಗವಿಶ್ರೀ ಫೋಟೋ ಪ್ರಕಟಗೊಂಡಿರುವುದು.