ಜಾತ್ರೆ ನಿಮಿತ್ತ ಗವಿಶ್ರೀ ಕ್ರೀಡಾ ಉತ್ಸವ: ಸಂಸದ ರಾಜಶೇಖರ ಹಿಟ್ನಾಳ

| Published : Dec 25 2024, 12:49 AM IST

ಜಾತ್ರೆ ನಿಮಿತ್ತ ಗವಿಶ್ರೀ ಕ್ರೀಡಾ ಉತ್ಸವ: ಸಂಸದ ರಾಜಶೇಖರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಗವಿಸಿದ್ದೇಶ್ವರ ಮಠದ ಜಾತ್ರೆಯ ನಿಮಿತ್ತ ನಗರದಲ್ಲಿ ಗವಿಶ್ರೀ ಕ್ರೀಡಾ ಉತ್ಸವ-2025 ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಗವಿಸಿದ್ದೇಶ್ವರ ಮಠದ ಜಾತ್ರೆಯ ನಿಮಿತ್ತ ನಗರದಲ್ಲಿ ಗವಿಶ್ರೀ ಕ್ರೀಡಾ ಉತ್ಸವ-2025 ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 17 ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಮುಕ್ತ ವಾಲಿಬಾಲ್, ಕಬಡ್ಡಿ, ಮ್ಯಾರಾಥಾನ, ಶಟಲ್ ಬ್ಯಾಡ್ಮಿಂಟನ್, ಛದ್ಮವೇಷ, ದೇಹದಾರ್ಡ್ಯ ಪಂದ್ಯಾವಳಿ ಏರ್ಪಡಿಸಲಾಗಿದೆ. ಪುರುಷರ ಆಹ್ವಾನಿತ ಕ್ರೀಡೆಗಳಾಗಿ ಕ್ರಿಕೆಟ್, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುರುಷರಿಗಾಗಿ ಜಿಲ್ಲಾ ಮಟ್ಟದಲ್ಲಿ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಯುವಕರಿಂದ ಎತ್ತಿನ ಬಂಡಿ ಜಗ್ಗುವುದು, ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ, ಪುರುಷರ ಹಾಗೂ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಜಿಲ್ಲಾ ಮಟ್ಟದ ರಂಗೋಲಿ ಹಾಗೂ ಥ್ರೋಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಹರಿಯಾಣದಿಂದಲೂ ಅನುಭವಿ ನುರಿತ ತಂಡಗಳು ಗವಿಶ್ರೀ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಗಾಳಿಪಟಗಳ ಪ್ರದರ್ಶನವನ್ನು 2025ರ ಜ.16 ರಂದು ನಡೆಸಲಿದ್ದಾರೆ. ಮಕ್ಕಳು ಯುವಕರಿಗೆ ಸ್ಫೂರ್ತಿ ತುಂಬುವಂತೆ ಮಕರ ಸಂಕ್ರಾತಿಯ ವಿಶೇಷವಾಗಿಯೆ ಬೃಹತ್ ಪ್ರಮಾಣದ ಗಾಳಿಪಟ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

ಜ. 14ರಂದು ಸಂಜೆ 3.30ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಗವಿಮಠ ಆವರಣದಲ್ಲಿ ಆಯೋಜಿಸಲಾಗಿದೆ. ರೈತರ ಎತ್ತು, ಚಕ್ಕಡಿ ಅಲಂಕಾರದ ಸ್ಪರ್ಧೆ ಜ. 17 ರಂದು ನಗರದ ತಾಲೂಕು ಕ್ರೀಡಾಂಗಣದಿಂದ ಗವಿಮಠದವರೆಗೆ ನಡೆಯಲಿದೆ. ಅದರಂತೆ, ರೈತ ಮಕ್ಕಳು ಮತ್ತು ಯುವಜನರಿಗಾಗಿ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿದೆ ಎಂದರು.

ಸ್ಪರ್ಧೆಗಳ ವಿವರ:

ಜ. 14ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಮ್ಯಾರಥಾನ್ ಸ್ಪರ್ಧೆ ಮತ್ತು ಗವಿಮಠ ಆವರಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜ. 15ರಂದು ಗವಿಮಠದ ಆವರಣದಲ್ಲಿ ವಿಶೇಷಚೇತನ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಮತ್ತು ಯುವಕರಿಂದ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆ ಇರಲಿವೆ. ಜ. 16ರಂದು ಗವಿಮಠದ ಆವರಣದಲ್ಲಿ ಕುಸ್ತಿ ಸ್ಪರ್ಧೆ ಮತ್ತು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶಟಲ್ ಬ್ಯಾಡ್ಮಿಂಟನ್ (ಡಬಲ್ಸ್) ಸ್ಪರ್ಧೆ, ಹಗ್ಗ-ಜಗ್ಗಾಟ, ಗಾಳಿಪಟ ಉತ್ಸವ ಮತ್ತು ತಾಲೂಕು ಕ್ರೀಡಾಂಗಣದಲ್ಲಿ ಬಾಲಿಬಾಲ್, ವಿಕಲಚೇತನರ ಬಾಲಿಬಾಲ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಬಡ್ಡಿ, ಛದ್ಮವೇಷ ಸ್ಪರ್ಧೆ, ಪುರುಷರಿಗಾಗಿ ದೇಹದಾರ್ಡ್ಯತೆ ಸ್ಪರ್ಧೆ ಹಾಗೂ ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ. ಜ. 17ರಂದು ಗವಿಮಠ ಆವರಣದಲ್ಲಿ ಸಂಗ್ರಾಣೆ ಕಲ್ಲು ಎತ್ತುವ ಸ್ಪರ್ಧೆ, ಎತ್ತಿನ ಬಂಡಿ ಅಥವಾ ಎತ್ತಿನ ಬಂಡಿ ಅಲಂಕಾರ ಸ್ಪರ್ಧೆ ಮತ್ತು ತಾಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೇರಿದಂತೆ ಇತರೆ ಹಲವಾರು ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ, ವೀರೇಶ ಮಹಾಂತಯ್ಯನಮಠ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಕೊಪ್ಪಳ ತಾಲೂಕು ಕ್ರೀಡಾಧಿಕಾರಿ ಶರಣಪ್ಪ ಬಂಡಿಹಾಳ ಸೇರಿದಂತೆ ಇತರರಿದ್ದರು.