ಸಾರಾಂಶ
ಕೊಪ್ಪಳ: ಗವಿಸಿದ್ದೇಶ್ವರ ಮಹಾರಥೋತ್ಸವವೇ ಬ್ರಹ್ಮ ದರ್ಶನ. ಜಾತ್ರೆಯಲ್ಲಿ ಸಾಮಾಜಿಕ ಕಾರ್ಯದ ಜೊತೆಗೆ ಶ್ರೀಗಳು ಸಂಪ್ರದಾಯದ ನವೀಕರಣದ ಕೆಲಸ ಮಾಡುತ್ತಿದ್ದಾರೆ ಎಂದು ಭಾರತದ ಫ್ರಾನ್ಸ್ ಮಾಜಿ ರಾಯಭಾರಿ ಸರ್ದಾರ ಡಾ.ಚಿರಂಜೀವಿ ಸಿಂಗ್ ಹೇಳಿದರು.ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆ ಸಂಪ್ರದಾಯಕ್ಕೆ ನವ ಚೈತನ್ಯ ತುಂಬುವ ಕಾರ್ಯವನ್ನು ಗವಿಶ್ರೀಗಳು ಮಾಡುತ್ತಿದ್ದಾರೆ. ಜೀವನ ಎಂಬುದು ಒಂದು ಯಾತ್ರೆ. ಯಾತ್ರೆಯಲ್ಲಿ ಒಂದು ಆಂತರಿಕ ಯಾತ್ರೆ ಇನ್ನೊಂದು ಬಾಹ್ಯ ಯಾತ್ರೆ. ಬಸವಣ್ಣನವರು ಹೇಳಿದಂತೆ ಆಂತರಿಕ ಶುದ್ಧಿ, ಬಾಹ್ಯ ಶುದ್ಧಿಗಳನ್ನು ಗವಿಮಠ ಮಾಡುತ್ತಿದೆ. ಗವಿಮಠದಲ್ಲಿ ಸ್ವಾಮೀಜಿ ಅವರಿಗೆ ನಿರ್ವಿಕಲ್ಪ ಸಮಾಧಿ ತಯಾರು ಮಾಡಿದ್ದರು. ಗುರುಗಳನ್ನು ಅಗಲಿ ಇರುವುದು ಆಗುವುದಿಲ್ಲ ಎಂದು ಗವಿಸಿದ್ದೇಶ್ವರರು ತಾವೇ ಜೀವಂತ ಸಮಾಧಿ ಆದರು. ಇದು ಗುರು ಪರಂಪರೆ ಮಠ ಎಂದರು.ಭಾರತ ಆಧ್ಯಾತ್ಮಿಕ ಪರಂಪರೆಯಲ್ಲಿ ವಿಶಿಷ್ಟ ಕೊಡುಗೆ ಇದೆ. ಅಂತಹ ಕಾರ್ಯವನ್ನು ಮಠಗಳು ಮಾಡುತ್ತಿವೆ. ದೇವರಿಗೆ ಹತ್ತಿರ ಹೋಗುವುದು ರಥೋತ್ಸವದ ಪ್ರತೀಕ. ಅಧ್ಯಾತ್ಮ ಹಾಗೂ ಧರ್ಮ ಬಿಟ್ಟರೆ ಜಾತ್ರೆಯ ಅರ್ಥವಿಲ್ಲ. ಅವುಗಳನ್ನು ಗವಿಮಠ ಜಾತ್ರೆ ಅಳವಡಿಸಿಕೊಂಡಿದೆ ಎಂದರು.ಗವಿಮಠದಲ್ಲಿ ಇಷ್ಟು ಜನರ ದರ್ಶನ ಮಾಡಿರುವುದು ಅವಿಸ್ಮರಣೀಯ ಅನುಭವ. ಜೀವನದಲ್ಲಿ ನಾವು ಸದ್ಗುಣ ಅಳವಡಿಸಿಕೊಂಡರೆ ಅದೇ ಸಂಪಾದನೆ. ಇಡೀ ಜೀವನ ಹಣ ಸಂಪಾದನೆಯಲ್ಲಿ ತೊಡಗಿರುತ್ತೇವೆ. ಆದರೆ ಶೂನ್ಯ ಸಂಪಾದನೆ ಮಾಡಬೇಕು. ಶೂನ್ಯ ಸಂಪಾದನೆ ಅಂದರೆ ಸಹಜಾವಸ್ಥೆಗೆ ತಲುಪುವುದು ಆಗಿದೆ. ಜ್ಞಾನದಿಂದ ಸಹಜತೆಯೆಡೆಗೆ, ಜೀವನದಿಂದ ಶೂನ್ಯತೆಯೆಡೆಗೆ ಹೋಗುವುದು. ಅಂತರಂಗ, ಬಹಿರಂಗದಲ್ಲಿ ಸಮ್ಮಿಲನ ಆಗುವುದು ಜಾತ್ರೆಯ ಸಂಕೇತ ಎಂದರು.೧೨ನೇ ಶತಮಾನದಲ್ಲಿನ ಶರಣೆಯರ ಬಗ್ಗೆ ನಾವು ಮಾತನಾಡುವುದಿಲ್ಲ. ಆದರೆ ೩೫ಕ್ಕೂ ಹೆಚ್ಚು ಶರಣೆಯರು ವಚನ ರಚಿಸಿದ್ದಾರೆ. ಇದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇವರು ಸಂಸ್ಕೃತ ವಿದ್ವಾಂಸರು ಆಗಿದ್ದರು. ಈಗ ನಾವು ನಾರಿ ಶಕ್ತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಶರಣರ ಕಾಲದಲ್ಲಿಯೇ ಅವರನ್ನು ನಾವು ಗೌರವಿಸಿದ್ದೇವೆ ಎಂದರು.ಬಸವಣ್ಣನವರು ಹೇಳುತ್ತಾರೆ, ದಯವೇ ಧರ್ಮದ ಮೂಲವಯ್ಯ ಎಂದು. ಅದರಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂದರು.ಜಾತ್ರೆಯಲ್ಲಿ ಎಲ್ಲವೂ ಇದೆ. ಆಧ್ಯಾತ್ಮ, ವ್ಯಾಪಾರ-ವಹಿವಾಟು ಇದೆ. ಪ್ರತಿದಿನ ಮಠಕ್ಕೆ ಬರಲು ಆಗುವುದಿಲ್ಲ. ಹೀಗಾಗಿ ವರ್ಷಕ್ಕೊಮ್ಮೆ ಜಾತ್ರೆಯ ಸಂದರ್ಭದಲ್ಲಿಯಾದರೂ ಬರಲಿ ಎನ್ನುವ ಕಾರಣಕ್ಕಾಗಿ ಆಚರಣೆಗೆ ಬಂದಿದೆ ಎಂದರು.