ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಮಾವಾಸ್ಯೆಯಂದು ಕೊನೆಗೊಳ್ಳಲಿದ್ದು

ಸೋಮರಡ್ಡಿ ಅಳವಂಡಿ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಕಳೆದ ಭಾನುವಾರ ದಾಖಲೆಯ ಭಕ್ತರು ಆಗಮಿಸಿದ್ದನ್ನು ನಿಭಾಯಿಸಲು ಹರಸಾಹಸ ಪಟ್ಟ ಪೊಲೀಸರಿಗೆ ಈಗ ಸಂಕ್ರಮಣ, ವೀಕೆಂಡ್ ಮತ್ತು ಅಮಾವಾಸ್ಯೆಯಂದು ಸೇರುವ ಜನಸ್ತೋಮ ನಿಭಾಯಿಸುವ ದೊಡ್ಡ ಸವಾಲು ಎದುರಾಗಿದೆ.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಮಾವಾಸ್ಯೆಯಂದು ಕೊನೆಗೊಳ್ಳಲಿದ್ದು, ಅಂದು ಸಹಜವಾಗಿಯೇ ಲಕ್ಷಾಂತರ ಭಕ್ತರು ಸೇರುತ್ತಾರೆ. ಅದರ ಜತೆಗೆ ಜ.15 ರಂದು ಸಂಕ್ರಮಣ ಇರುವುದರಿಂದಲೂ ಲಕ್ಷಾಂತರ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಹುಲಿಗೆಮ್ಮ ದೇವಸ್ಥಾನ, ಅಂಜನಾದ್ರಿ ಹಾಗೂ ತುಂಗಭದ್ರಾ ನದಿಯಲ್ಲಿ ಮಿಂದೇಳುವ ಭಕ್ತರು ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸುವ ಸಾಧ್ಯತೆ ಅಧಿಕವಾಗಿರುವುದರಿಂದ ಲಕ್ಷ ಲಕ್ಷ ಸಂಖ್ಯೆಯ ಭಕ್ತರು ಗವಿಮಠ ಮತ್ತು ಗವಿಮಠದ ಮಹಾದಾಸೋಹಕ್ಕೆ ಬರುವ ಸಾಧ್ಯತೆ ಇದೆ.

ಶುಕ್ರವಾರ ಒಂದೇ ದಿನ ಬಿಡುವು, ಮತ್ತೆ ವಾರದ ಕೊನೆಯ ದಿನವಾದ ಶನಿವಾರ ಹಾಗೂ ಭಾನುವಾರ, ಅದರಲ್ಲೂ ಭಾನುವಾರ ಅಮಾವಾಸ್ಯೆ ಮತ್ತು ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಕೊನೆಯ ದಿನವಾಗಿರುವುದರಿಂದ ಸೇರುವ ಜನಸ್ತೋಮ ಊಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಸಿದ್ಧವಾದ ಪೊಲೀಸ್ ಪಡೆ: ಸಂಕ್ರಮಣ, ವಾರದ ಕೊನೆ ದಿನ ಹಾಗೂ ಅಮಾವಾಸ್ಯೆಯಂದು ಸೇರುವ ಭಕ್ತ ಸಮೂಹ ನಿಭಾಯಿಸಲು ರಥೋತ್ಸವದ ವೇಳೆಯಲ್ಲಿ ಅನುಸರಿಸಿದ ಕ್ರಮವನ್ನೇ ಅನುಸರಿಸಲು ಮುಂದಾಗಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆ ಈಗಾಗಲೇ ಪ್ರತ್ಯೇಕ ಸಭೆ ನಡೆಸಿದೆ. ಅಷ್ಟೇ ಅಲ್ಲ ಮಾರ್ಗ ಬದಲಾವಣೆ ಮಾಡಿ ಟ್ರಾಫಿಕ್ ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಮಹಾದಾಸೋಹದಲ್ಲಿ ವಿಶೇಷ ಸಿದ್ಧತೆ:ಮಹಾದಾಸೋಹದಲ್ಲಿಯೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಕ್ರಮಣ, ಶನಿವಾರ, ಭಾನುವಾರ ಮತ್ತು ಅಮಾವಾಸ್ಯೆಯಂದೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕಿಂತಲೂ ಅಧಿಕ ಪ್ರಮಾಣದ ಆಹಾರ ಸಿದ್ಧತೆ ಮಾಡಿಕೊಳ್ಳಲು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸೂಚನೆ ನೀಡಿದ್ದಾರೆ.

ಶ್ರೀಗಳೇ ಮಹಾದಾಸೋಹದಲ್ಲಿ ಸುತ್ತಾಡಿ ವಿಶೇಷ ದಿನಗಳ ಮತ್ತು ಜಾತ್ರೆಯ ಕೊನೆಯಲ್ಲಿ ಸೇರುವ ಭಾರಿ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು ಎಂದು ಸಿದ್ಧತೆ ಪರಿಶೀಲಿಸಿದ್ದಾರೆ.

ವಿಶೇಷ ಬಸ್ಸಿನ ವ್ಯವಸ್ಥೆ:ಭಾರಿ ಪ್ರಮಾಣದಲ್ಲಿ ಪ್ರಯಾಣಿಕರು ಆಗಮಿಸುವ ನಿರೀಕ್ಷೆಯಲ್ಲಿ ಕೊಪ್ಪಳ ವಿಭಾಗದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿದೆ. ಪಕ್ಕದ ಜಿಲ್ಲೆಗಳಿಂದಲೂ ಹೆಚ್ಚುವರಿ ಬಸ್ಸು ತರಿಸಿಕೊಂಡು ಸುತ್ತಮುತ್ತಲ ಜಿಲ್ಲಾ ಕೇಂದ್ರ ಮತ್ತು ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಓಡಿಸಲಿದ್ದಾರೆ.