ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜ. ೫ರಂದು ಸಂಜೆ ೫.೩೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಈ ಮೂಲಕ ಜಾತ್ರೆಯ ಮೂರು ದಿನಗಳ ಕಾಲ ಉತ್ಸವದ ಮಾದರಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜ. ೫ರಂದು ಸಂಜೆ ೫.೩೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ.

ಈ ಮೂಲಕ ಜಾತ್ರೆಯ ಮೂರು ದಿನಗಳ ಕಾಲ ಉತ್ಸವದ ಮಾದರಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ಈ ವರ್ಷದ ಮಹಾರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಚಾಲನೆ ನೀಡಲಿದ್ದು, ಜಾತ್ರೆಯ ಸಿದ್ಧತೆ ಸಂಪೂರ್ಣಗೊಂಡಿದ್ದು ಮಠದ ಆವರಣದಲ್ಲಿ ಭಕ್ತರಿಂದ ಕಳೆಗಟ್ಟಿದೆ.

ಉತ್ಸವದ ಮಾದರಿಯಲ್ಲಿ ನಡೆಯುವ ಜಾತ್ರೆ

ಕೊಪ್ಪಳದ ಗವಿಮಠ ಜಾತ್ರೆ ಅಂದರೆ ಅದು ಕೇವಲ ಒಂದು ಧಾರ್ಮಿಕ ಆಚರಣೆಯಾಗಿಲ್ಲ. ಅದೊಂದು ಉತ್ಸವದ ಮಾದರಿಯಲ್ಲಿ ನಡೆಯುವ ಜಾತ್ರೆ ಎಂದೇ ಪ್ರಸಿದ್ಧಿ ಪಡೆದುಕೊಂಡು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈಗಾಗಲೇ ಜಾತ್ರೆಯ ಕಾರ್ಯಕ್ರಮಗಳು ಆರಂಭಗೊಂಡಿದೆ. ರಥೋತ್ಸವ ನೋಡಲು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಈಗಾಗಲೇ ಶ್ರೀಮಠ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಸಂಜೆ ನಡೆಯಲಿರುವ ಮಹಾರಥೋತ್ಸವಕ್ಕಾಗಿ ರಥವನ್ನು ಈಗಾಗಲೇ ಸಿಂಗಾರ ಮಾಡಲಾಗಿದ್ದು, ರಥ ಸಾಗುವ ಹಾದಿಯಲ್ಲಿ ಮಹಿಳೆಯರು ರಂಗೋಲಿ ಚಿತ್ತಾರ ಬಿಡಿಸಲಿದ್ದಾರೆ.

ರಥೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀಮಠದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಶೌಚಾಲಯ ಹಾಗೂ ಸ್ನಾನಗೃಹ ತಾತ್ಕಾಲಿಕವಾಗಿಯೂ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅನೇಕ ಭಕ್ತರು ಜಾತ್ರೆಗೆ ಬಂದು ಶ್ರೀಮಠದಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಶ್ರೀಮಠ ಈಗಾಗಲೇ ಭಕ್ತರಿಂದ ಕಳೆಗಟ್ಟಿದೆ. ಇನ್ನು ರಥೋತ್ಸವದ ದಿನವಾದ ಸೋಮವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಲಿದ್ದಾರೆ.

ಮಹಾದಾಸೋಹ ಮಂಟಪ:

ವರ್ಷದಿಂದ ವರ್ಷಕ್ಕೆ ಗವಿಮಠದ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಭಕ್ತರಿಗೆ ಮಹಾದಾಸೋಹ ಮಂಟಪದ ಮೂಲಕ ಪ್ರಸಾದ ಬಡಿಸಲಾಗುತ್ತಿದೆ. ಶ್ರೀಮಠದ ಪಕ್ಕದಲ್ಲಿ ಮಹಾದಾಸೋಹ ಮಂಟಪ ನಿರ್ಮಿಸಲಾಗಿದೆ. ಪ್ರತಿ ವರ್ಷ ೪ ಎಕರೆ ಪ್ರದೇಶದಲ್ಲಿ ಮಹಾದಾಸೋಹ ಮಂಟಪ ನಿರ್ಮಾಣ ಮಾಡಲಾಗುತ್ತಿತ್ತು. ಈ ವರ್ಷ ಮತ್ತೆ ಎರಡು ಎಕರೆ ವಿಸ್ತೀರ್ಣ ಹೆಚ್ಚಿಸಲಾಗಿದ್ದು, ಒಟ್ಟು ೬ ಎಕರೆ ಪ್ರದೇಶದಲ್ಲಿ ಮಹಾದಾಸೋಹ ಮಂಟಪ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಮಹಾದಾಸೋಹ ಮಂಟಪದ ಒಳಗೆ ಹೋಗಿ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ. ಏಕಕಾಲದಲ್ಲಿ ಸಾವಿರಾರು ಜನರು ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ನೂರಾರು ಸ್ವಯಂ ಸೇವಕರು ಪ್ರಸಾದ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಾದ ಬಡಿಸಲು ಸಾಕಷ್ಟು ಕೌಂಟರ್‌ ಮಾಡಲಾಗಿದೆ. ಮಹಾದಾಸೋಹಕ್ಕೆ ನಾಡಿನ ನಾನಾ ಭಾಗಗಳಿಂದ ರೊಟ್ಟಿಗಳು, ಸಿಹಿ ಪದಾರ್ಥ ಸೇರಿದಂತೆ ದವಸಧಾನ್ಯ ಶ್ರೀಮಠಕ್ಕೆ ತಂದು ಅರ್ಪಿಸುತ್ತಿದ್ದು, ಲಕ್ಷಾಂತರ ರೊಟ್ಟಿ ಸಂಗ್ರಹವಾಗಿವೆ.

ಪಾದಯಾತ್ರೆ: ಗವಿಮಠದ ಜಾತ್ರೆಯ ಮಹಾರಥೋತ್ಸವದ ದಿನವಾದ ಜ. ೫ರಂದು ನಾನಾ ಗ್ರಾಮಗಳಿಂದ ಭಕ್ತರು ಪಾದಯಾತ್ರೆಯ ಮೂಲಕವೂ ಶ್ರೀಮಠಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದಲೇ ಸಾವಿರಾರು ಭಕ್ತರು ಬೆಳಗಿನ ಜಾವದಿಂದಲೇ ಪಾದಯಾತ್ರೆಯ ಮೂಲಕ ಆಗಮಿಸಲಿದ್ದಾರೆ.

ಹರಕೆ ಹೊತ್ತುಕೊಂಡವರು, ಪಾದಯಾತ್ರೆಯ ಮೂಲಕ ಸನ್ನಿಧಾನಕ್ಕೆ ಬರುತ್ತೇನೆ ಎಂದು ಬೇಡಿಕೊಂಡ ಸಾವಿರಾರು ಭಕ್ತರು ಪ್ರತಿ ವರ್ಷವೂ ಮಹಾರಥೋತ್ಸವದ ದಿನದಂದು ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ಅದರಂತೆ ಈ ವರ್ಷವೂ ಅನೇಕ ಗ್ರಾಮಗಳಿಂದ ಭಕ್ತರು ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸಲಿದ್ದಾರೆ. ಇನ್ನು ಪಾದಯಾತ್ರೆಯ ಮೂಲಕ ಕೊಪ್ಪಳದ ಜಾತ್ರೆಗೆ ಬರುವ ಭಕ್ತರಿಗೆ ನಗರದ ಹೊರವಲಯ ಸೇರಿದಂತೆ ವಿವಿಧೆಡೆ ಅನೇಕ ಸೇವಾಕರ್ತರು ಉಪಾಹಾರದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಾದಯಾತ್ರೆಯ ಮಾರ್ಗ ಮಧ್ಯದಲ್ಲಿ ಪಾದಯಾತ್ರಿಗಳಿಗೆ ಉಪಾಹಾರ ನೀಡಲು ಸೇವಾಕಾಂಕ್ಷಿಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಕೊಪ್ಪಳದ ಗವಿಮಠ ಜಾತ್ರೆಯ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶ್ರೀಮಠ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಮಹಾದಾಸೋಹದಲ್ಲಿಂದು: ಮೊದಲ ದಿನ ಮೈಸೂರು ಪಾಕ್, ಬೂಂದಿ, ಮಾದಲಿ, ಹಾಲು, ತುಪ್ಪ, ಮಿಕ್ಸ್ ಬಾಜಿ, ದಾಲ್, ರೊಟ್ಟಿ, ಅನ್ನ, ಸಾಂಬರ್, ಉಪ್ಪಿನಕಾಯಿ ಹಾಗೂ ಪುಡಿಚಟ್ನಿ. ಬೆಳಗ್ಗೆ ಉಪಾಹಾರದ ವ್ಯವಸ್ಥೆಯೂ ಇರುತ್ತದೆ. ಬೆಳಗ್ಗೆ ಪ್ರಾರಂಭವಾಗುವ ಮಹಾದಾಸೋಹ ಮಧ್ಯರಾತ್ರಿಯವರೆಗೂ ಸಾಂಗವಾಗಿ ನಡೆಯುತ್ತದೆ. ಒಂದರಿಂದ ಒಂದೂವರೆ ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಲಿದ್ದಾರೆ.

ಗವಿಮಠ ಜಾತ್ರೆಯಲ್ಲಿಂದು: ಬೆಳಗ್ಗೆ 4 ಗಂಟೆಗೆ ಶ್ರೀಗವಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ

10.30 ಗಂಟೆಗೆ ಗವಿಮಠದ ಆವರಣದಲ್ಲಿ ಪೊಲೀಸ್‌ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ.

5.30 ಗಂಟೆಗೆ ಮಹಾರಥೋತ್ಸವ

ಮಹಾರಥೋತ್ಸವದ ಬಳಿಕ ಕೈಲಾಸ ಮಂಟಪದಲ್ಲಿ ಧಾರ್ಮಿಕ, ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ

ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ

ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಶ್ರೀಗವಿಮಠದ ಯಾತ್ರಿ ನಿವಾಸದ ಆವರಣದಲ್ಲಿರುವ ಶಾಂತವನದಲ್ಲಿ ಅನ್ವೇಷಣೆ ಕಾರ್ಯಕ್ರಮ

ಹಿರೇಬಗನಾಳ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಸೇವಾ ನಾಟ್ಯ ಸಂಘದಿಂದ ರಾತ್ರಿ 10.30ಕ್ಕೆ ಮಠದ ಆವರಣದಲ್ಲಿ ನಾಟಕ ಪ್ರದರ್ಶನ

ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನ ಪ್ರಾರಂಭ