ಸಾರಾಂಶ
ಪ್ರಣವ ಸ್ವರೂಪ ಹಾಗೂ ಓಂಕಾರದ ಮೂಲ ಸ್ವರೂಪವೇ ಮಹಾಗಣಪತಿ. ಸಂಸಾರದ ಮೋಹದಿಂದ ಮುಕ್ತಿ ಹೊಂದಲು ಮಹಾ ಗಣಪತಿ ನಾಮಸ್ಮರಣೆಯಿಂದ ಸಾಧ್ಯ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಣವ ಸ್ವರೂಪ ಹಾಗೂ ಓಂಕಾರದ ಮೂಲ ಸ್ವರೂಪವೇ ಮಹಾಗಣಪತಿ. ಸಂಸಾರದ ಮೋಹದಿಂದ ಮುಕ್ತಿ ಹೊಂದಲು ಮಹಾ ಗಣಪತಿ ನಾಮಸ್ಮರಣೆಯಿಂದ ಸಾಧ್ಯ ಎಂದು ಹೊಸಪೇಟೆ ಚಿಂತಾಮಣಿಮಠ ಅಮರಾವತಿ ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಮಹಾಸ್ವಾಮಿಗಳು ಹೇಳಿದರು.ಲೋಕ ಕಲ್ಯಾಣಕ್ಕಾಗಿ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಪೂರ್ಣಾಹುತಿ ನಂತರ ಜರುಗಿದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಾಧನೆಗೆ ಅನೇಕ ಅಡೆತಡೆಗಳು ಬರುತ್ತವೆ. ಲೋಕ ಕಲ್ಯಾಣಕ್ಕಾಗಿ ಕೊಪ್ಪಳದ ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ನಿಸ್ವಾರ್ಥವಾಗಿ ಲಕ್ಷ ಮೋದಕ ಹೋಮ ಆಯೋಜಿಸಿರುವ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ. ನಮ್ಮ ದೇಶದಲ್ಲಿ ಸನಾತನ ಧರ್ಮಯಾಗಗಳ ಮೂಲಕ ಲೋಕದ ಕಲ್ಯಾಣಕ್ಕಾಗಿ ಮಾದರಿಯಾದವರು ಎಂದರು.ಶ್ರೀ ಶಂಕರಾಚಾರ್ಯರು ದೇಶದ ಉದ್ದಗಲಕ್ಕೂ ಸಂಚರಿಸಿ, ಸನಾತನ ಧರ್ಮದ ಉಳುವಿಗಾಗಿ ಜೀವನವಿಡಿ ಮನುಕುಲದ ಒಳಿತಿಗಾಗಿ ಶ್ರಮಿಸಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳು ಸಾಗಿ ಭಗವಂತನ ಸ್ಮರಣೆಯ ಮೂಲಕ ಸರ್ವರ ಒಳಿತಿಗೆ ಶ್ರಮಿಸುವಂತೆ ತಿಳಿಸಿದರು.
ಪಂ. ಡಾ. ಬೆಳವಾಡಿ ಹರೀಶ್ ಭಟ್ ಮಾತನಾಡಿದರು. ಈ ಸಂದರ್ಭ ರಾಮಕೃಷ್ಣ ಆಶ್ರಮ ಶ್ರೀ ಚೈತನ್ಯಾನಂದ ಸ್ವಾಮೀಜಿ ಇದ್ದರು. ಗೋಮಾತೆಯ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಪೂರ್ಣಾಹುತಿಯೊಂದಿಗೆ ಪೂರ್ಣಗೊಂಡಿತು. ಹೋಮದಲ್ಲಿ ನೂರಾರು ವಿಪ್ರರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.