ಬ್ರಹ್ಮತ್ವ ಹೊಂದಲು ಗಾಯತ್ರಿ ಮಂತ್ರ ಸಾಧನ: ನಾರಾಯಣ ಯಾಜಿ

| Published : Sep 05 2024, 12:32 AM IST

ಬ್ರಹ್ಮತ್ವ ಹೊಂದಲು ಗಾಯತ್ರಿ ಮಂತ್ರ ಸಾಧನ: ನಾರಾಯಣ ಯಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ದೇವತೆಗಳಿಗೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ಅವೆಲ್ಲವೂ ಆಯಾ ದೇವತೆಗಳ ಸಾಕಾರ ರೂಪದ ಉಪಾಸನೆಯಾಗಿದೆ. ಎಲ್ಲ ಛಂದಸ್ಸುಗಳಿಗೂ ಗಾಯತ್ರಿ ಛಂದಸ್ಸು ಮೂಲಭೂತವಾಗಿದೆ.

ಕುಮಟಾ: ಗಾಯತ್ರಿ ಮಂತ್ರವು ನಿರಾಕಾರ, ನಿರ್ಗುಣ ಪರಬ್ರಹ್ಮದ ಉಪಾಸನೆಯಾಗಿದ್ದು, ಬ್ರಹ್ಮತ್ವ ಹೊಂದುವ ಅಪೂರ್ವ ಸಾಧನವಾಗಿದೆ ಎಂದು ಸಾಹಿತಿ ಮತ್ತು ಹಿರಿಯ ವಿದ್ವಾಂಸ ನಾರಾಯಣ ಯಾಜಿ ತಿಳಿಸಿದರು.ಇಲ್ಲಿನ ಹವ್ಯಕ ವಿದ್ಯಾವರ್ಧಕ ಸಂಘದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆಯಿಂದ ಹವ್ಯಕ ಸಭಾಮಂಟಪದಲ್ಲಿ ಹಮ್ಮಿಕೊಂಡಿದ್ದ ವೇದ ಮಾತೆ ಗಾಯತ್ರಿ ಮಂತ್ರ, ಅರ್ಥ ಹಾಗೂ ವ್ಯಾಪ್ತಿ ವಿಷಯದ ಕುರಿತು ಇತ್ತೀಚೆಗೆ ಉಪನ್ಯಾಸ ಮಾಡಿದರು. ಎಲ್ಲ ದೇವತೆಗಳಿಗೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ಅವೆಲ್ಲವೂ ಆಯಾ ದೇವತೆಗಳ ಸಾಕಾರ ರೂಪದ ಉಪಾಸನೆಯಾಗಿದೆ. ಎಲ್ಲ ಛಂದಸ್ಸುಗಳಿಗೂ ಗಾಯತ್ರಿ ಛಂದಸ್ಸು ಮೂಲಭೂತವಾಗಿದೆ. ಗಾಯತ್ರಿ ಉಪಾಸನೆಗೆ ಪ್ರಶಾಂತವಾದ ಬ್ರಾಹ್ಮೀ ಮುಹೂರ್ತವೇ ಪ್ರಶಸ್ತ. ಗಾಯತ್ರಿ ಮಂತ್ರ ಉಪಾಸನೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಮತ್ತು ಗಾಯತ್ರಿ ಮಂತ್ರದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು. ಬಳಿಕ ಸಭಿಕರ ಸಂದೇಹಗಳಿಗೆ ಉತ್ತರಿಸಿದರು. ಸಂಘದ ವತಿಯಿಂದ ನಾರಾಯಣ ಯಾಜಿ ಅವರನ್ನು ಸನ್ಮಾನಿಸಲಾಯಿತು. ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶ್ರೀಕಾಂತ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಆಡಳಿತ ಸಮಿತಿ ಸದಸ್ಯರಾದ ಸಾವಿತ್ರಿ ಭಟ್ಟ, ಶಿವರಾಮ ಭಟ್ಟ, ವಿಘ್ನೇಶ್ವರ ಭಟ್ಟ ಇತರರು ಇದ್ದರು. ಸಾಮೂಹಿಕ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಂಜುನಾಥ ಹೆಗಡೆ ಪ್ರಾರ್ಥಿಸಿದರು. ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿ, ಪರಿಚಯಿಸಿದರು. ಆರ್.ವಿ. ಹೆಗಡೆ ಭದ್ರನ್ ಧನ್ಯವಾದ ಸಮರ್ಪಿಸಿದರು. ಎಂ.ಎನ್. ಹೆಗಡೆ ನಿರೂಪಿಸಿದರು.