ಗಾಯತ್ರಿ ಸಿದ್ದೇಶ್ವರ್ ಗೆಲ್ಲಿಸಿ, ಶಿವಪ್ಪರ ಶಕ್ತಿ ಪ್ರದರ್ಶಿಸಬೇಕು

| Published : Apr 03 2024, 01:30 AM IST

ಸಾರಾಂಶ

ದೇಶದ ಹಿತದೃಷ್ಟಿಯಿಂದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ನಾವು ಎಚ್.ಡಿ.ದೇವೇಗೌಡರ ಸಲಹೆ, ಸೂಚನೆಯಂತೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರವಾಗಿ ಕೆಲಸ ಮಾಡಿ, ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಹರಿಹರದ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹರಿಹರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ದೇಶದ ಹಿತದೃಷ್ಟಿಯಿಂದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ನಾವು ಎಚ್.ಡಿ.ದೇವೇಗೌಡರ ಸಲಹೆ, ಸೂಚನೆಯಂತೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರವಾಗಿ ಕೆಲಸ ಮಾಡಿ, ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಹರಿಹರದ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಆಯೋಜಿಸಿದ್ದ ದಿವಂಗತ ಎಚ್.ಶಿವಪ್ಪ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಬಂಧು-ಬಳಗ, ಕಾರ್ಯಕರ್ತರು ಎಲ್ಲರೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಮತ ಚಲಾಯಿಸಬೇಕು. ಅಧಿಕಾರ ಶಾಶ್ವತ ಅಲ್ಲ, ವಿಶ್ವಾಸ ಶಾಶ್ವತ. ನಮ್ಮ ಮೇಲೆ ವಿಶ್ವಾಸವಿಟ್ಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಹರಿಹರ ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಮಾವೇಶ ನಡೆಸಲಾಗುವುದು ಎಂದರು.

ಹರಿಹರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದರೂ ಎಂದೂ ಸುಮ್ಮನೆ ಕುಳಿತಿಲ್ಲ. ಜನರ ನಡುವೆ, ಜನರಿಗೆ ಸ್ಪಂದಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಾವೆಲ್ಲ ಒಂದೇ ಎಂದುಕೊಂಡು ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ಹರಿಹರ ತಾಲೂಕಿನಲ್ಲಿ ಹೆಚ್ಚಿನ ಲೀಡ್ ಕೊಡುವ ಮೂಲಕ ದಿವಂಗತ ಎಚ್.ಶಿವಪ್ಪ ಅವರ ಶಕ್ತಿ ತೋರಿಸಬೇಕು ಎಂದು ತಿಳಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ೧೦ ವರ್ಷಗಳಿಂದ ದೇಶದ ಆಡಳಿತ ನೋಡಿರುವ ಎಚ್.ಡಿ.ದೇವೇಗೌಡರು ಮತ್ತೆ ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬರಬೇಕು ಅಂತ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಎಲ್ಲೆಡೆಯೂ ಹೃದಯಪೂರ್ವ ಸ್ಪಂದನೆ ನೀಡುತ್ತಿದ್ದು, ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಿಜೆಪಿ, ಜೆಡಿಎಸ್ ಅನ್ನು ಮುಗಿಸುತ್ತೇವೆ ಎಂದು ಹೇಳುತ್ತಾರೆ. ನಾವಿಬ್ಬರು ಸೇರಿ ಕಾಂಗ್ರೆಸ್ ಅನ್ನು ರಾಜಕೀಯವಾಗಿ ಮುಗಿಸಬೇಕು. ಜೆಡಿಎಸ್ ಕಾರ್ಯಕರ್ತರು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬೆಂಬಲ ನೀಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಕೆ.ಬಿ.ಕೊಟ್ರೇಶ್, ಗಣೇಶ್ ದಾಸಕರಿಯಪ್ಪ, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಎಚ್.ಶಿವಪ್ಪ ಅಭಿಮಾನಿಗಳು ಭಾಗವಹಿಸಿದ್ದರು.

- - - -೨ಎಚ್‌ಆರ್‌ಆರ್೧:

ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ದಿವಂಗತ ಎಚ್.ಶಿವಪ್ಪ ಅವರ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿದ ಸಂಸದ ಸಿದ್ದೇಶ್ವರ್, ಶಾಸಕ ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಶುಭ ಕೋರಿದರು.