ಡಿ.ಎನ್. ಅಕ್ಕಿ ಕಲ್ಯಾಣ ಕರ್ನಾಟಕದ ಗೆಜೆಟಿಯರ್: ಡಾ.ಶೈಲಜಾ

| Published : Mar 04 2024, 01:17 AM IST

ಸಾರಾಂಶ

ಶಹಾಪುರ ತಾಲೂಕಿನ ಅನೇಕ ಪ್ರಮುಖ ಹಳ್ಳಿಗಳನ್ನು ಕುರಿತು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಬೆಳಕು ಚೆಲ್ಲಿದ ಹಿರಿಯ ಸಾಹಿತಿ ಡಿ.ಎನ್. ಅಕ್ಕಿ ಅವರು ಕಲ್ಯಾಣ ಕರ್ನಾಟಕದ ಗೆಜೆಟಿಯರ್ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಎಲ್ಲಾ ದೃಷ್ಟಿಯಿಂದಲೂ ತನ್ನದೆಯಾದ ಮಹತ್ವ ಪಡೆದ ಶಹಾಪುರ ತಾಲೂಕಿನ ಅನೇಕ ಪ್ರಮುಖ ಹಳ್ಳಿಗಳನ್ನು ಕುರಿತು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಬೆಳಕು ಚೆಲ್ಲಿದ ಹಿರಿಯ ಸಾಹಿತಿ ಡಿ.ಎನ್. ಅಕ್ಕಿ ಅವರು ಕಲ್ಯಾಣ ಕರ್ನಾಟಕದ ಗೆಜೆಟಿಯರ್ ಆಗಿದ್ದಾರೆ ಎಂದು ಸಾಹಿತಿ ಹಾಗೂ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕಿ ಡಾ. ಶೈಲಜಾ ಬಾಗೇವಾಡಿ ಅವರು ಹೇಳಿದರು.

ಸಮೀಪದ ಭೀಮರಾಯನ ಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ 4ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಅನೇಕ ಮಹತ್ವದ ಸಂಶೋಧನ ಕಾರ್ಯಗಳು ಸಂಶೋಧಕ ಡಿ.ಎನ್. ಅಕ್ಕಿ ಅವರು ಮಾಡಿದ್ದಾರೆ. ಹೊಸ ತಲೆಮಾರಿನ ಬರಹಗಾರರಿಗೆ ಸ್ಫೂರ್ತಿಯ ಚೇತನರಾಗಿದ್ದಾರೆ ಎಂದರು.

ಸಮ್ಮೇಳನದ ಅಧ್ಯಕ್ಷರಾದ ಡಿ.ಎನ್. ಅಕ್ಕಿ ಮಾತನಾಡಿ, ತಾಲೂಕಿನ ಸಾಹಿತ್ಯ ಇತಿಹಾಸ, ಸಂಸ್ಕೃತಿಯ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಗಳಾಗಬೇಕು. ಐತಿಹಾಸಿಕ ಪರಂಪರೆಯ ತಾಣಗಳ ಮಹತ್ವ ಮತ್ತು ಅವುಗಳ ರಕ್ಷಣೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ, ಸಮ್ಮೇಳನದಲ್ಲಿ ಚರ್ಚೆಯಾಗಿರುವ ಪ್ರತಿಯೊಂದು ವಿಚಾರಗಳು, ಚಿಂತನೆಗಳು, ಸಲಹೆಗಳು ತಾಲೂಕಿನ ಪ್ರತಿಯೊಂದು ಕ್ಷೇತ್ರಗಳ ಕುರಿತು ಜಾಗೃತಿ ಮೂಡಿಸಿವೆ. ಅವುಗಳ ಜ್ಞಾನವನ್ನು ವಿಸ್ತರಿಸಿವೆ ಎಂದರು.

ಸಮ್ಮೇಳನದ ಯಶಸ್ವಿಗೆ ತಾಲೂಕ ಮತ್ತು ಭೀಮರಾಯನ ಗುಡಿ ವಲಯಗಳ ಘಟಕದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು, ಹಿರಿಯ ಸಾಹಿತಿಗಳು, ಸಚಿವರು, ಜನಪ್ರತಿನಿಧಿಗಳು, ಸಾರ್ವಜನಿಕರು ಮುಂತಾದವರು ಶ್ರಮಿಸಿದ್ದಾರೆ ಮತ್ತು ಸಮ್ಮೇಳನದ ಯಶಸ್ವಿಗೆ ರಚಿಸಿದ ವಿವಿಧ ಸಮಿತಿಗಳು ಬಹಳಷ್ಟು ಅಚ್ಚುಕಟ್ಟುತನದಿಂದ ಕಾರ್ಯನಿರ್ವಹಿಸಿವೆ. 4ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ಹೊಸ ಸಾದ್ಯತೆಗಳಿಗೆ ನಾಂದಿಯಾಡಿತು ಎಂದು ಹೇಳಬಹುದು.

ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿ ಹಣಮಂತಿ ಗುತ್ತೇದಾರ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಭೀಮರಾಯನಗುಡಿ ವಲಯ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್, ಕವಿ ವಿಜಯಕುಮಾರ ಸತ್ಯಂಪೇಟ, ಸಿದ್ದಪ್ಪ ಹೊಸ್ಮನಿ, ದೋರನಹಳ್ಳಿ ವಲಯ ಅಧ್ಯಕ್ಷ ಮಹೇಶ ಪತ್ತಾರ, ಪ್ರಾಚಾರ್ಯ ಪ್ರೊ. ಶಿವಲಿಂಗಣ್ಣ ಸಾಹು, ಕೋಶಾಧ್ಯಕ್ಷ ಶಂಕರ ಹುಲಕಲ್, ಗೌರವ ಕಾರ್ಯದರ್ಶಿ ಸುರೇಶ ಅರುಣಿ, ರಾಘವೇಂದ್ರ ಹಾರಣಗೇರ, ಸಾಯಬಣ್ಣ, ಭಾಗ್ಯ ದೊರೆ, ತಿಪ್ಪಣ್ಣ ಕ್ಯಾತನಾಳ, ಮಡಿವಾಳಪ್ಪಗೌಡ ಪಾಟೀಲ್, ಸತೀಶ ತುಳೇರ, ಬಸವರಾಜ ಸಿನ್ನೂರು, ಸಂಗನಬಸಪ್ಪ ಹಾದಿಮನಿ, ಬಿ.ಎಂ. ಪೂಜಾರಿ, ಗುರುಲಿಂಗಪ್ಪ ಸಾಗರ ಇತರರಿದ್ದರು. ಈ ಸಂದರ್ಭದಲ್ಲಿ ಅನೇಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.