ಸಾರಾಂಶ
ಶಿಗ್ಗಾಂವಿ: ತಾಪಮಾನ ಏರಿಕೆ ತಡೆಗಟ್ಟುವ, ಪರಿಸರ ರಕ್ಷಿಸಿ, ಜೀವ ಉಳಿಸುವ ಕಾರ್ಯಕ್ಕೆ ನಾವೆಲ್ಲ ಸಜ್ಜಾಗಬೇಕಿದೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೇಳಿದರು.
ತಾಲೂಕಿನ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಕೋಶ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ವಿಶ್ವವೇ ತಾಪಮಾನ ಏರಿಕೆಯ ಸವಾಲು ಎದುರಿಸುತ್ತಿದೆ. ತಾಪಮಾನ ಏರಿಕೆಯಿಂದ ಪರಿಸರದಲ್ಲಿ ಏರುಪೇರಾಗಿ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕುವ ಅಪಾಯ ಎದುರಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ, ಎನ್‌ಎಸ್‌ಎಸ್ ಕೋಶದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ ಹಾಗೂ ಸೇವಾ ಮನೋಭಾವ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳ ಕಲಿಕೆಯ ಜತೆಗೆ ಭಾವೈಕ್ಯತೆ, ಪರಿಸರ ಜಾಗೃತಿ, ಯುವ ಶಕ್ತಿ ಸಬಲೀಕರಣ ಆಗಲಿದೆ. ಈ ನಿಟ್ಟಿನಲ್ಲಿ ಸಜ್ಜಾಗಬೇಕು ಎಂದು ಹೇಳಿದರು.
ಈಗಾಗಲೇ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಶಿಬಿರ ಆಯೋಜನೆ ಮಾಡಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ತಳಿಯ ಹೂವಿನ ಸಸ್ಯಗಳು, ನೂರಾರು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಶೈಕ್ಷಣಿಕ ಚಟುವಟಿಕೆ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಲು ನಿರಂತರ ಕಾರ್ಯಕ್ರಮ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಚೈತನ್ಯ ನೀಡುವಂತಹ ಪರಿಸರ ನಿರ್ಮಾಣ ಮಾಡುವ ಮೂಲಕ ವಿವಿ ಸಮಗ್ರ ಬೆಳವಣಿಗೆಗೆ ನೀಲನಕ್ಷೆ ಸಿದ್ಧಗೊಳಿಸಲಾಗಿದೆ ಎಂದರು.ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಗೊಳಿಸಲು ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ, ಎನ್‌ಎಸ್‌ಎಸ್ ಎಂದರೆ ಸ್ವಚ್ಛತೆ ಕಾರ್ಯಕ್ಕೆ ಮಾತ್ರ ಸಿಮೀತವಲ್ಲದೇ, ಸದೃಢ ಭಾರತ ಕಟ್ಟುವ ಸಂಕಲ್ಪವಾಗಿದೆ ಎಂದರು.
ಎನ್ಎಸ್ಎಸ್ ಸಂಯೋಜಕ ಡಾ. ಗಿರೇಗೌಡ ಅರಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ವೆಂಕನಗೌಡ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧನಾಧಿಕಾರಿ ಡಾ. ಪ್ರೇಮಕುಮಾರ, ಸಹಾಯಕ ಕುಲಸಚಿವ ಶಹಜಾನ ಮುದಕವಿ ಹಾಗೂ ವಿಶ್ವವಿದ್ಯಾಲಯದ ಹಲವು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ಪ್ರದರ್ಶನ ಕಲೆ ವಿಭಾಗದ ವಿದ್ಯಾರ್ಥಿ ತಂಡದಿಂದ ಬರಗಾಲ ಕಿರು ನಾಟಕ ಪ್ರದರ್ಶನ ಮನುಷ್ಯರ ಹೊಣೆಗಾರಿಕೆಯನ್ನು ಎಚ್ಚರಿಸುವಂತಿತ್ತು. ಏಕವ್ಯಕ್ತಿ ಕಂಸಾಳೆ ನೃತ್ಯ, ಜಾನಪದ ಹಾಡು, ಕ್ರಾಂತಿಗೀತೆಗಳ ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.