ಸಾರಾಂಶ
ಭದ್ರಾವತಿ: ಈ ಹಿಂದೆ ನಗರಸಭೆಯ ಮೀಸಲಾತಿಯ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಪುನಃ ಮೀಸಲಾತಿಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಜಿ.ಎಚ್.ಸತ್ಯನಾರಾಯಣ ಅವರು ಗೀತಾ ರಾಜ್‌ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಮಧ್ಯಾಹ್ನ ೧.೩೦ಕ್ಕೆ ಘೋಷಿಸಿದರು. ಪೌರಾಯುಕ್ತ ಪ್ರಕಾಶ್.ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. ಕಾಂಗ್ರೆಸ್-೧೮, ಜೆಡಿಎಸ್-೪, ಬಿಜೆಪಿ-೩ ಮತ್ತು ಪಕ್ಷೇತರ-೧ ಸದಸ್ಯ ಸೇರಿದಂತೆ ಒಟ್ಟು ೨೬ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಸೇರಿ ಒಟ್ಟು ೨೭ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಮೊದಲ ಅವಧಿಯ ೩೦ ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಿಕೊಂಡು ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್ ಮತ್ತು ಲತಾ ಚಂದ್ರಶೇಖರ್ ಒಟ್ಟು ೪ ಮಹಿಳೆಯರು ಅಧಿಕಾರ ಅನುಭವಿಸಿದ್ದರು. ೨ನೇ ಅವಧಿಗೆ ಮೀಸಲಾತಿ ಘೋಷಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಾತ್ರ ನಡೆದು ಎಂ.ಮಣಿ ಎಎನ್‌ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಇವರನ್ನು ಪ್ರಭಾರ ಅಧ್ಯಕ್ಷರಾಗಿ ನಿಯೋಜನೆಗೊಳಿಸಲಾಗಿತ್ತು. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿತ್ತು.ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ-ಜೆಡಿಎಸ್ ಸದಸ್ಯರು:
ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಪ್ರೇಮ ಬದರಿನಾರಾಯಣ, ಬಸವರಾಜ.ಬಿ ಆನೇಕೊಪ್ಪ, ಪಲ್ಲವಿ ದಿಲೀಪ್ ಮತ್ತು ಕೋಟೇಶ್ವರರಾವ್ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿದ್ದ ವಿ.ಕದಿರೇಶ್, ಅನಿತಾ ಮಲ್ಲೇಶ್ ಮತ್ತು ಶಶಿಕಲಾ ನಾರಾಯಣಪ್ಪರವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.ಪಟಾಕಿ ಸಿಡಿಸಿ ಸಂಭ್ರಮಾಚರಣೆ:
ಚುನಾವಣಾಧಿಕಾರಿ ಜಿ.ಎಚ್.ಸತ್ಯನಾರಾಯಣ ಅವರು ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರಸಭೆ ಮುಂಭಾಗ ಕಾಂಗ್ರೆಸ್ ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಅಧ್ಯಕ್ಷೆ ಗೀತಾ ರಾಜ್‌ಕುಮಾರ್‌ಗೆ ವಿಡಿಯೋ ಕರೆ ಮೂಲಕ ಮೊಬೈಲ್‌ನಲ್ಲಿಯೇ ಶುಭ ಕೋರಿದರು. ಉಳಿದಂತೆ ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ನಗರಸಭೆ ಉಪಾಧ್ಯಕ್ಷ ಎಂ.ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಗೀತಾ ರಾಜ್‌ಕುಮಾರನ್ನು ಅಭಿನಂದಿಸಿದರು. ಸದಸ್ಯೆಯಾದ ಮೊದಲ ಅವಧಿಯಲ್ಲೇ ಅಧ್ಯಕ್ಷೆ: ವಾರ್ಡ್ ನಂ.೨ರ ಸದಸ್ಯೆಯಾಗಿರುವ ಗೀತಾರಾಜ್‌ಕುಮಾರ್ ಅವರು ನಗರಸಭೆ ಸದಸ್ಯರಾದ ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ೨ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಒಂದೇ ಬಾರಿ ೨ ಅವಧಿಯ ಅಧ್ಯಕ್ಷರಾಗಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.