ಕೋಟ: ಇಲ್ಲಿನ ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್ ವತಿಯಿಂದ ಕೆ.ಸಿ. ಕುಂದರ್ ಸ್ಮರಣಾರ್ಥ ನಡೆದ ಆನಂದೋತ್ಸವ ಕಾರ್ಯಕ್ರಮವನ್ನು ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಬುಕ್ ಹಸ್ತಾಂತರಿಸಿ ಮಾತನಾಡಿ, ಆನಂದ್ ಸಿ. ಕುಂದರ್ ಈ ಕರಾವಳಿ ಕಡಲ ತಟವನ್ನು ಶಿಕ್ಷಣ ಕಾಶಿಯಾಗಿಸಿದ್ದಾರೆ. ತನ್ನ ದುಡಿಮೆ ಹಣದಲ್ಲಿ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗಳಿಗೆ ಜೀವ ತುಂಬಿ ಅದನ್ನು ರಾಜ್ಯದಲ್ಲೇ ಮಾದರಿಯಾಗಿಸಿದ್ದಾರೆ ಎಂದು ಕೊಂಡಾಡಿದರು.

ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ, ಮಾಜಿ ಸಚಿವ ಕೆ. ಜಯ್ರಕಾಶ್ ಹೆಗ್ಡೆ ಮಕ್ಕಳಲ್ಲಿ ನಾಗರಿಕತೆ ಬೆಳೆಯಬೇಕಾದರೆ ತಂದೆ ತಾಯಂದಿರು ಮತ್ತು ಶಿಕ್ಷಕರ ಪಾತ್ರ ಅಷ್ಟೆ ಬಹುಮುಖ್ಯವಾದುದು ಎಂದರಲ್ಲದೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಬೇಕಾದರೆ ಮನೆ ಹಾಗೂ ಶಾಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೆ. ಕೃಷ್ಣಕಾಂಚನ್ ಅವರು ಆನಂದ ಕುಂದರ್ ಅವರ ಸಹಸ್ರ ಗಿಡ ನೆಡುವ ಸಂಕಲ್ಪದ ಅಂಗವಾಗಿ ಗಿಡಗಳನ್ನು ಸ್ಥಳೀಯ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪಿಯು ಕಾಲೇಜಿಗೆ ವಾಹನದ ಕೀಯನ್ನು ಹಸ್ತಾಂತರಿಸಿದರು. ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಶಾಲಾ ಮಕ್ಕಳಿಗೆ ಸಮವಸ್ತ್ರ ಹಸ್ತಾಂತರಿಸಿದರು.

ನಂತರ ಒಟ್ಟು 52 ಶಾಲೆಗಳ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಗಳಿಸಿದ ಮಣೂರು ಪ್ರೌಢಶಾಲೆ ಮತ್ತು ಪಪೂ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತು ಪಡುಕರೆ ಸಂಯುಕ್ತ ಪ್ರೌಢಶಾಲಾ, ಪಿಯು ಕಾಲೇಜಿನ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಗೀತಾನಂದ ಫೌಂಡೇಶನ್ 5 ಲಕ್ಷ ರು. ದೇಣಿಗೆಯನ್ನು ಜಿಲ್ಲಾಸ್ಪತ್ರೆಯ ಸರ್ಜನ್ ಅಶೋಕ್ ಅವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮ ಆಯೋಜಕರಾದ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್, ಮೊಗವೀರ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಕೊರವಾಡಿ, ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್, ಪಿಯು ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜಿ ಕೆ., ಪ್ರಾಥಮಿಕ ವಿಭಾಗದ ವಿಜಯ ಅಲ್ತೂರು ಉಪಸ್ಥಿತರಿದ್ದರು. ಸಂಯುಕ್ತ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವಿವೇಕಾನಂದ ಬಿ. ಗಾಂವ್ಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜನತಾ ಸಂಸ್ಥೆಯ ಸಿಬ್ಬಂದಿ ಮಮತಾ ನಿರೂಪಿಸಿದರೆ, ಗೀತಾನಂದ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಕೋಟ ವಂದಿಸಿದರು. ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಸಹಕರಿಸಿದರು.