ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣದ ಸಂಬಂಧ ಆರೋಪಿ ಲೋಹಿತ್‌ಗೆ ಮಂಪರು ಮತ್ತು ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿದ ವೇಳೆ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪ
ಬೆಂಗಳೂರು : ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣದ ಸಂಬಂಧ ಆರೋಪಿ ಲೋಹಿತ್‌ಗೆ ಮಂಪರು ಮತ್ತು ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿದ ವೇಳೆ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಆರೋಪಿ ಲೋಹಿತ್‌ನನ್ನು ಬಂಧಿಸಿದ್ದರು. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಟ್ ಆಫ್ ಲಿವಿಂಗ್ ಸಮೀಪ ಪತ್ತೆಯಾದ ಜಿಲೆಟಿನ್ ಕಡ್ಡಿಗಳಿಗೂ ಆರೋಪಿಗೂ ನಂಟು ಇದೆಯಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು, ಆದರೆ ಆರೋಪಿ ವಿಚಾರಣೆ ವೇಳೆ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆರೋಪಿಯಿಂದ ಸತ್ಯಾಸತ್ಯತೆ ಬಾಯ್ಬಿಡಿಸಲು ಕಗ್ಗಲೀಪುರ ಠಾಣೆ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆ ನಡೆಸುವ ಸಲುವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಪರೀಕ್ಷೆಗಳನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಪ್ರಕರಣದ ವಿವರ:
ಪ್ರಧಾನಿ ಮೋದಿ ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಗಲು ಮೇ 10 ರಂದು ನಗರಕ್ಕೆ ಆಗಮಿಸಿದ್ದರು. ಅಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಆರೋಪಿ ಲೋಹಿತ್ ಎಚ್‌ಎಲ್ ವಿಮಾನ ನಿಲ್ದಾಣ ಮತ್ತು ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಲೋಹಿತ್‌ನನ್ನು ಕೋರಮಂಗಲದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದರು.
ಬಾಂಬ್ ಬೆದರಿಕೆ ಕರೆ ಹಿನ್ನೆಲೆ ಪರಿಶೀಲನೆ
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪೊಲೀಸರು ಆರ್ಟ್ ಆಫ್ ಲಿವಿಂಗ್ ಸುತ್ತ ಮುತ್ತ ಪರಿಶೀಲನೆ ನಡೆಸಿದಾಗ ಕಗ್ಗಲೀಪುರ ಠಾಣಾ ವ್ಯಾಪ್ತಿಯ ವಡೇರಹಳ್ಳಿ ರಸ್ತೆ ಬದಿಯಲ್ಲಿ ಕಾಟನ್ ಬಾಕ್ಸ್‌ನಲ್ಲಿ ಇಡಲಾಗಿದ್ದ ಎರಡು ಜಿಲೆಟಿನ್ ಕಡ್ಡಿಗಳು ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿತ್ತು.

