ಭ್ರೂಣಲಿಂಗ ಪತ್ತೆ: ವೈದ್ಯರಿಗೆ 3 ವರ್ಷ ಜೈಲು, ₹10 ಸಾವಿರ ದಂಡ

| Published : Mar 17 2024, 01:48 AM IST

ಭ್ರೂಣಲಿಂಗ ಪತ್ತೆ: ವೈದ್ಯರಿಗೆ 3 ವರ್ಷ ಜೈಲು, ₹10 ಸಾವಿರ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

2ನೇ ಬಾರಿ ಅಪರಾಧಕ್ಕೆ 5 ವರ್ಷ ಜೈಲು, ₹50 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಹೇಳಿದರು. ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೀದರ್

ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಇದನ್ನು ಮಾಡುವ ವೈದ್ಯರಿಗೆ ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು. ದಂಡ ಮತ್ತು ಎರಡನೆಯ ಭಾರಿ ಮಾಡಿದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಹೇಳಿದರು.

ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪಿಸಿ ಮತ್ತು ಪಿಎನ್‌ಡಿಟಿ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಲಾಗುತ್ತದೆ. ಗರ್ಭಿಣಿ ಮಹಿಳೆಗೆ ಆಕೆಯ ಪತಿ, ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡ ಹಾಗೂ ನಂತರದ ಅಪರಾಧಕ್ಕೆ 5 ವರ್ಷ ಜೈಲು ಹಾಗೂ 1 ಲಕ್ಷ ರು. ದಂಡ ಹಾಕಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಡೊಂಗ್ರೆ ಮಾತನಾಡಿ, ಜಿಲ್ಲೆಯಲ್ಲಿ 116 ಸ್ಕ್ಯಾನಿಂಗ್‌ ಕೇಂದ್ರಗಳಿವೆ. ಇವುಗಳಲ್ಲಿ 106 ಕಾರ್ಯನಿರ್ವಹಿಸುತ್ತಿದ್ದು ಸರ್ಕಾರಿ 9 ಹಾಗೂ ಉಳಿದವುಗಳು ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳಾಗಿವೆ. ಈ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಅಲ್ಲಿ ಯಾವುದೇ ಭ್ರೂಣಲಿಂಗ ಪತ್ತೆ ಮಾಡದಂತೆ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಭ್ರೂಣಲಿಂಗ ತಡೆ ಕುರಿತು ವ್ಯಾಪಕವಾಗಿ ಪ್ರಚಾರ ಮಾಡಲು ಕರ ಪತ್ರಗಳು ಹಾಗೂ ವಿಡಿಯೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಭ್ರೂಣಲಿಂಗ ಹತ್ಯ ತಡೆ ಕುರಿತು ಜಾಗೃತಿ ಮೂಡಿಸುವ ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಭೆಯಲ್ಲಿ ರೇಡಿಯಾಲಾಜಿಸ್ಟ್ ಅಮಿತ್ ಷಾ, ಬೀದರ್‌ ನಗರದ ತಾಯಿ ಮಕ್ಕಳ ನೂರು ಹಾಸಿಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸೋಹೆಲ್, ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಮಂಜಿಳಾ ಮೂಲಗೆ, ವಾರ್ತಾಧಿಕಾರಿ ಜಿ.ಸುರೇಶ, ಎಫ್‌ಪಿಎಐ ಅಧ್ಯಕ್ಷರಾದ ಡಾ. ನಾಗೇಶ, ಟೀಂ ಯುವ ಎನ್‌ಜಿ ವಿನಯಕುಮಾರ, ಜಿಲ್ಲಾ ಸಲಹಾ ಸಮಿತಿ ವಕೀಲರಾದ ಉಮೇಶ ಪಾಂಡ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.