ಸಾರಾಂಶ
ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರ ಗಮನ ಸೆಳೆದ ಲಿಂಗತ್ವ ಅಲ್ಪಸಂಖ್ಯಾತರು । ಉದ್ಯೋಗಿನಿ ಬದಲಾಗಿ ಕಿರುಸಾಲ ಯೋಜನೆ ಜಾರಿಗೆ
ಕನ್ನಡಪ್ರಭ ವಾರ್ತೆ ರಾಮನಗರಚೇತನ, ಧನಶ್ರೀ ಯೋಜನೆಯಡಿ ಸಿಗುವ ಸೌಲಭ್ಯ, ಗೃಹಲಕ್ಷ್ಮೀ ಯೋಜನೆ ಹಣ ಬರುತ್ತಿಲ್ಲ ಎಂಬುದು ಸೇರಿ ಹಲವಾರು ಸಮಸ್ಯೆಗಳನ್ನು ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸ್ತ್ರೀ ಶಕ್ತಿ ಸಂಘಟನೆ ಪ್ರತಿನಿಧಿಗಳು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿರವರ ಗಮನ ಸೆಳೆದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ನಿಗಮ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಮತ್ತು ಕುಂದು ಕೊರತೆ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸ್ತ್ರೀ ಶಕ್ತಿ ಸಂಘಟನೆ ಪ್ರತಿನಿಧಿಗಳು ಅಹವಾಲು ಹೇಳಿಕೊಂಡರು.ಲಿಂಗತ್ವ ಅಲ್ಪಸಂಖ್ಯಾತರಿಗೆ ಚೇತನ ಯೋಜನೆಯಲ್ಲಿ ಹೆಚ್ಚಿನ ನೆರವು ಸಿಗುತ್ತಿಲ್ಲ. ಸೆಕ್ಸ್ ವರ್ಕ್ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ ಎನ್ನುತ್ತೀರಿ. ಈ ರೀತಿ ಸೌಲಭ್ಯ ಸಿಕ್ಕರೆ ಯಾವ ರೀತಿಯಲ್ಲಿ ಜೀವನ ನಡೆಸುವುದು? ಸಮುದಾಯ ಹೇಗೆ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಪ್ರತಿಬಿಂಬ ಸಂಸ್ಥೆ ಪ್ರಕಾಶ್ ಪ್ರಶ್ನಿಸಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ 1200 ರು.ಗಳ ಮಾಸಾಶನ ಜಾರಿಯಾಗಿಲ್ಲ. ಗೃಹಲಕ್ಷ್ಮೀ ಯೋಜನೆ ಸಿಗುತ್ತಿಲ್ಲ. ಮಂಗಳಮುಖಿಯರಿಗೆ ಬಾಡಿಗೆ ಮನೆಗಳು ಸಿಗುತ್ತಿಲ್ಲ. ವಸತಿ ನಿವೇಶನ, ಸರ್ಕಾರಿ ಉದ್ಯೋಗ ನೀಡಬೇಕು. ಉದ್ಯೋಗಿನಿ ಯೋಜನೆಯಲ್ಲಿ ಎರಡೆರಡು ಸಲ ಅರ್ಜಿ ಸಲ್ಲಿಸಿದ್ದರೂ ಯೋಜನೆ ಸೌಲಭ್ಯ ಸಿಗುತ್ತಿಲ್ಲ. ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಒತ್ತು ಸರ್ಕಾರದಿಂದ ಸಿಗುತ್ತಿಲ್ಲ ಎಂದು ಹಲವರು ಅಧ್ಯಕ್ಷರ ಗಮನಕ್ಕೆ ತಂದರು.ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 2 ಸಾವಿರ ರು. ಸಿಗುವ ವ್ಯವಸ್ಥೆಗೆ ನಾಳೆಯಿಂದ ಅರ್ಜಿ ಪಡೆಯಲಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ನಿಗಮ ಮತ್ತಷ್ಟು ಒತ್ತು ನೀಡುತ್ತದೆ. ಫಲಾನುಭವಿಗಳು ನಿಗಮದಲ್ಲಿ ಸಿಗುವ ಪ್ರಯೋಜನಗಳನ್ನು ಉಪಯೋಗಿಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ಧಮನಿತ ಮಹಿಳೆಯರಿಗೆ ಉದ್ಯೋಗಿನಿ ಬದಲಾಗಿ ಕಿರುಸಾಲ ಯೋಜನೆ ಮೂಲಕ ನೇರವಾಗಿ ನಿಗಮದಿಂದ ಸಾಲ ಸೌಲಭ್ಯ ನೀಡುವ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಮಹಿಳೆಯರಿಗೆ ಕಿರುಸಾಲ ನೇರ ಯೋಜನೆ ಅನುಕೂಲವಾಗುತ್ತದೆ. ಸುಲಭವಾಗಿ ಸರಳೀಕರಣ ರೀತಿಯಲ್ಲಿ ಹಣ ತಲುಪಿಸುವ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದರು.ಈಗ ನಿಗಮದಲ್ಲಿ ಅನುದಾನ ಕೊರತೆ ಇದೆ. ಲಭ್ಯವಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚಿನ ರೀತಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಇಲಾಖೆಗೆ ಬೇಕಿರುವ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಆದೇಶಪತ್ರಗಳನ್ನು ನಿಗಮ ಅಧ್ಯಕ್ಷೆ ಪದ್ಮಾವತಿ ವಿತರಿಸಿದರು. ನಂತರ ಮಹಿಳೆಯರು ನಿಗಮದಿಂದ ಸಾಲ ಸೌಲಭ್ಯ ಪಡೆದು ನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ನೀಡಿದರು.ಜಿಪಂ ಸಹಾಯಕ ಕಾರ್ಯದರ್ಶಿ ಜಯಪಾಲ್, ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಗಾಯಿತ್ರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು, ಆರೋಗ್ಯ ಇಲಾಖೆ ಅಧಿಕಾರಿ ಡಾ. ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರಾಮನಗರ ಕಾಂತರಾಜು, ಮಾಗಡಿ ಸುರೇಂದ್ರ, ಕನಕಪುರ ನಾರಾಯಣ್, ಹಾರೋಹಳ್ಳಿ ವೇಣುಗೋಪಾಲ್ ಉಪಸ್ಥಿತರಿದ್ದರು.