ಸಾರಾಂಶ
ಗಂಗಾವತಿ: ರಾಜ್ಯದಲ್ಲಿರುವ ಪಿಂಜಾರ-ನದಾಫ್ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಶೀಘ್ರದಲ್ಲೇ ನಡೆಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ನದಾಫ್ ಮತ್ತು ಪಿಂಜಾರ್ ಸಮಾಜದ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಪಿಂಜಾರ ಸಮುದಾಯದಲ್ಲಿ ವಿವಿಧ ಉಪ ಪಂಗಡಗಳಿವೆ. ಇದರ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ ಮಾಡುವುದಕ್ಕೆ ಧಾರವಾಡ ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ನೀಡಲಾಗುತ್ತದೆ. ರಾಜ್ಯದಲ್ಲಿ ಅಧ್ಯಯನ ಮಾಡಲು ಸರ್ಕಾರದಿಂದ ₹15 ರಿಂದ ₹20 ಲಕ್ಷ ನೀಡಲಾಗುತ್ತದೆ ಎಂದರು.
ತಮ್ಮ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದ್ದರಿಂದ ತ್ವರಿತಗತಿಯಲ್ಲಿ ಅಧ್ಯಯನ ಮಾಡಲು ಸೂಚನೆ ನೀಡಲಾಗುತ್ತದೆ ಎಂದರು.ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದರೆ ಸಾಲದು, ಇದಕ್ಕೆ ಅವಶ್ಯವಿರುವ ಅನುದಾನ ನೀಡುವಂತೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುತ್ತದೆ. ನದಾಫ್ ಸಮಾಜ ತೀವ್ರ ಹಿಂದುಳಿದ ಸಮಾಜ. ಗಾದಿ ತಯಾರಿಸುವ ಕಾಯಕ ಇವರದು. ಇಂತಹ ಹಿಂದುಳಿದ ಸಮುದಾಯಕ್ಕೆ ಸರ್ಕಾರ ಸಂಪೂರ್ಣ ಸೌಲಭ್ಯ ನೀಡಲಾಗುತ್ತದೆ. ಸಮಾಜದವರು ನೀಡಿದ ಮನವಿಯನ್ನು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಲ್ಲಿಸಲಾಗುತ್ತದೆ ಎಂದರು.
ಕರ್ನಾಟಕ ನಾಮಕರಣವಾಗಿ 50 ವರ್ಷ ಕಳೆದವು. ಇಂತಹ ಸಂಭ್ರಮದ ಆಚರಣೆ ಸಂದರ್ಭದಲ್ಲಿ ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೊರೆತಿರುವುದು ಪುಣ್ಯದ ಕೆಲಸವಾಗಿದೆ ಎಂದರು.ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ನದಾಫ್ ನಿಗಮ ಸ್ಥಾಪಿಸಿ ಸರ್ಕಾರ ₹100 ಕೋಟಿ ಅನುದಾನ ನೀಡಬೇಕು. ಈ ಸಮಾಜಕ್ಕೆ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ತಾವು ಈ ಹಿಂದೆ ಸಚಿವರಾಗಿದ್ದಾಗ ಸಮಾಜಕ್ಕೆ ಸಾಕಷ್ಟು ಸೌಲಭ್ಯ ನೀಡಲಾಗಿತ್ತು. ಈಗಲೂ ಸಹ ಸಮುದಾಯದವರನ್ನು ಗುರುತಿಸಿ ಸರ್ಕಾರದಿಂದ ನಾಮನಿರ್ದೇಶನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಹಿರಾಳ ಗ್ರಾಮದ ಇಬ್ರಾಹಿಂಸಾಬ್ ನದಾಫ್ ಸಂಘವನ್ನು ಹುಟ್ಟು ಹಾಕಿದ ಪ್ರಮುಖರಾಗಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನದಿಂದ ಸರ್ಕಾರಿ ಸೌಲಭ್ಯ ದೊರಕುತ್ತವೆ. ಬಜೆಟ್‌ನಲ್ಲಿ ನಿಗಮಕ್ಕೆ ಅನುದಾನ ಘೋಷಣೆಯಾದರೆ ಮಾತ್ರ ಪ್ರಗತಿಯಾಗಲು ಸಾಧ್ಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿದರು. ಸಾನ್ನಿಧ್ಯವನ್ನು ಹೆಬ್ಬಾಳ ನಾಗಭೂಷಣ ಶಿವಚಾರ್ಯರು, ಹಜರತ್ ಮೌಲಾನ ಮಹ್ಮದ್ ಹುಸೇನ್ ಖಾದ್ರಿ, ರೈಟ್ ರೆವರೆಂಡ್ ಜಾನ್ ಮೂಳ್ಳೂರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಮುಮ್ತಾಜ್ ಬೇಗಂ, ಅಜ್ಮೀರ್ ನಂದಾಪುರ, ಅಲ್ಲಾಗಿರಿರಾಜ ಕನಕಗಿರಿ, ಜಲೀಲ್ ಪಾಷ ಗಂಗಾವತಿ, ಜಹೀರಾಬೇಗಂ ಅವರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಬಸವರಾಜ ದಢೇಸೂಗೂರು, ಹಸನಸಾಬ ದೋಟಿಹಾಳ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷಾ, ಎಚ್.ಜಲೀಲಸಾಬ, ಸೈಯದ್ ಫೌಂಡೇಶನ್ ಮುಖ್ಯಸ್ಥ ಕೆ.ಎಂ. ಸೈಯದ್, ಅಮ್ಜದ್ ಪಟೇಲ್ ಕೊಪ್ಪಳ, ನಿವೃತ್ತ ಐಜಿಪಿ ಶಾಂತಕುಮಾರ, ಕಾಸಿಂ ಅಲಿ ಮುದ್ದಾಬಳ್ಳಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))