ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಯುತ್ತಾರೆ.

ಮರಿಯಮ್ಮನಹಳ್ಳಿ: ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಸಲಹಾ ಸಮಿತಿಯ ಅಧ್ಯಕ್ಷ ವೀರೇಶ್‌ ಹೇಳಿದರು.

ಇಲ್ಲಿನ ಉಜ್ಜಯಿನಿ ಶಾಲಾ ಆವರಣದಲ್ಲಿ ಶನಿವಾರ ಸಂಜೆ ಬೆಳಕು ಎಜ್ಯುಕೇಷನಲ್‌ ಟ್ರಸ್ಟ್‌ನ ದಶಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ -2024 ರಜಾ-ಮಜಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಯುತ್ತಾರೆ. ನಾವು ಎಷ್ಟೇ ದೊಡ್ಡವರಾದರೂ ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಕೆಲಸವನ್ನು ಮರೆಯಬಾರದು ಎಂಬುದನ್ನು ರಂಗಭೂಮಿ ತಿಳಿಸಿಕೊಡುತ್ತದೆ. ಶಿಬಿರದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಬೆಳಸುತ್ತದೆ ಎಂದರು.

ವೈದ್ಯೆ ಡಾ.ಮಂಜುಳಾ ಮೂರ್ತಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಮಕ್ಕಳ ಬೇಸಿಗೆ ಶಿಬಿರಗಳು ಪೂರಕವಾಗಿವೆ. ನಮ್ಮ ಕಲೆ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಬೇಸಿಗೆ ಶಿಬಿರಗಳು ಅಗತ್ಯವಾಗಿವೆ ಎಂದು ಅವರು ತಿಳಿಸಿದರು.

ಬದಲಾಗುತ್ತಿರುವ ಕಾಲಘಟದಲ್ಲಿ ನಮ್ಮತನ ಉಳಿಸಿಕೊಡು ಬೆಳೆಯಬೇಕಾಗಿದೆ. ನಮ್ಮ ಆಚಾರ, ವಿಚಾರ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ನಮ್ಮ ಭಾರತೀಯ ಪರಂಪರೆಯನ್ನು ಬೇಸಿಗೆ ಶಿಬಿರಗಳಲ್ಲಿ ಹಾಡು, ನೃತ್ಯ, ನಾಟಕಗಳ ಮೂಲಕ ಮಕ್ಕಳಿಗೆ ತಿಳಿಸಿಕೊಡಲು ಸಾಧ್ಯವಾಗಲಿದೆ. ಮಕ್ಕಳು ಸಾಂಸ್ಕೃತಿಕವಾಗಿ ಬೆಳೆಯಬೇಕು ಎಂದು ಅವರು ಹೇಳಿದರು.

ಇಲ್ಲಿನ ಲಲಿತ ಕಲಾರಂಗದ ಅಧ್ಯಕ್ಷ ಎಚ್‌.ಮಂಜುನಾಥ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಬೇಸಿಗೆ ಶಿಬಿರಗಳ ಮೂಲಕ ಹೊರಹೊಮ್ಮಿಸಲು ಸಾಧ್ಯವಾಗಲಿದೆ. ಬೇಸಿಗೆ ಶಿಬಿರಗಳ ಮೂಲಕ ಬೆಳಕಿಗೆ ಬಂದ ಪ್ರತಿಭಾವಂತ ಮಕ್ಕಳು ಇಂದು ರಂಗಭೂಮಿಯಲ್ಲಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸ್ಥಳೀಯ ಉಜ್ಜಯಿನಿ ಶಾಲೆಯ ಶಿಕ್ಷಕ ಶಿವರುದ್ರಯ್ಯ, ಬೆಳಕು ಎಜ್ಯುಕೇಷನಲ್‌ ಟ್ರಸ್ಟ್‌ನ ಅಧ್ಯಕ್ಷೆ ಸಾಧನ ಮಂಜುನಾಥ ಸಭೆಯಲ್ಲಿ ಮಾತನಾಡಿದರು.

ಬೆಳಕು ಎಜ್ಯುಕೇಷನಲ್‌ ಟ್ರಸ್ಟ್‌ನ ಸಂಸ್ಥಾಪಕ ಮಂಜುನಾಥ ಈಡಿಗರ್‌, ಸ್ಥಳೀಯ ಮುಖಂಡ ಭೀಮಪ್ಪ ಗಡ್ಡಿ, ವಕೀಲ ಕುಂಚೂರ್‌ ಕಲೀಂ ಸಭೆಯಲ್ಲಿ ಉಪಸ್ಥಿತರಿದ್ದರು.

ಕಲಾವಿದ ಚಂದ್ರಕಾಂತ್‌ ಪ್ರಾರ್ಥಿಸಿದರು. ಕುಂಚೂರ್‌ ಕಲೀಂ ಸ್ವಾಗತಿಸಿದರು. ಸಾಧನ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಈಡಿಗರ್‌ ವಂದಿಸಿದರು. ಹ್ಯಾಟಿ ಮಂಜುನಾಥ ನಿರ್ದೇಶನದಲ್ಲಿ ವಿ.ಎಸ್‌. ಅಶ್ವತ್ಥ್‌ ರಚಿಸಿರುವ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನಗೊಂಡಿತು. ನಾಟಕಕ್ಕೆ ಸಂಗೀತ ಚಂದ್ರಕಾಂತ್‌, ತಬಲ ಜಿ.ಕೆ. ಮೌನೇಶ್‌, ಗಾಯನ ಜೆ. ದುರ್ಗೇಶ್‌ ಮತ್ತು ಚಂದ್ರಕಾಂತ್‌ ಹಾಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮರಿಯಮ್ಮನಹಳ್ಳಿ ತಾಂಡದ ವಿದ್ಯಾರ್ಥಿ ವಿ.ಸ್ನೇಹ 625ಕ್ಕೆ 611 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಕ್ಕಾಗಿ ಸನ್ಮಾನಿ ಗೌರವಿಸಲಾಯಿತು.