ಕನ್ನಡಪ್ರಭ ವಾರ್ತೆ ಮಡಿಕೇರಿ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೌಂಡೇಶನ್ ವತಿಯಿಂದ ಮಂಗಳವಾರ ತನಲ್ ಕೂರ್ಗ್ ಆಶ್ರಮ, ವಿಕಾಸ ಆಶ್ರಮ ಮತ್ತು ಶಕ್ತಿ ವೃದ್ಧಾಶ್ರಮದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೃದ್ಧಾಶ್ರಮದಲ್ಲಿನ ಆಶ್ರಯದಾತರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ತನಲ್ ಕೂರ್ಗ್ ವೃದ್ಧಾಶ್ರಮಕ್ಕೆ ಶಾಸಕರು ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೌಂಡೇಶನ್‌ನ ಗೌರವ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ಹೂ ಗುಚ್ಛ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಶಾಸಕರು ಎಫ್‌ಎಂಸಿ ಮತ್ತು ಜಿಟಿ ಫೌಂಡೇಶನ್ ವತಿಯಿಂದ ಅಸಹಾಯಕರು, ವೃದ್ಧರು, ಶೋಷಿತರು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಜನರಲ್ ತಿಮ್ಮಯ್ಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ವೃದ್ಧಾಶ್ರಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಸಮಾಜ ಹಿರಿಯರನ್ನು ಗೌರವಿಸಬೇಕು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದರಿಂದ ಮಕ್ಕಳಿಗೂ ತಂದೆ ತಾಯಿಯನ್ನು ಗೌರವಿಸುವ ಭಾವನೆ ಬರುತ್ತದೆ. ಆದ್ದರಿಂದ ಯಾರನ್ನು ಸಹ ಉದಾಸೀನ ಮಾಡದೆ ಪ್ರತಿಯೊಬ್ಬರೂ ಹಿರಿಯರನ್ನು ಗೌರವಿಸಬೇಕು. ಎಫ್‌ಎಂಸಿ ಮತ್ತು ಜಿಟಿ ಫೌಂಡೇಶನ್ ಮತ್ತಷ್ಟು ಸಮಾಜಮುಖಿಯಾಗಿ ಕಾರ್‍ಯಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.

ಪ್ರಮುಖರಾದ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಕೊಡಗಿನ ಮಣ್ಣಿನ ವೀರಪುತ್ರ ಜನರಲ್ ತಿಮ್ಮಯ್ಯ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಎಫ್‌ಎಂಸಿ ಮತ್ತು ಜಿಟಿ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಕುಕ್ಕೇರ ಜಯ ಚಿಣ್ಣಪ್ಪ, ಗೌಡಂಡ ತಿಮ್ಮಯ್ಯ, ಅಬ್ದುಲ್ ಕರೀಂ, ಡೇವಿಡ್ ವೇಗಸ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಎಫ್‌ಎಂಸಿ ಮತ್ತು ಜಿಟಿ ಫೌಂಡೇಶನ್‌ನ ಪಪ್ಪು ತಿಮ್ಮಯ್ಯ, ಸಂಜು ಕಾವೇರಪ್ಪ, ಟ್ರಾವೆಲ್ ಕೂರ್ಗ್ ಅಸೋಷಿಯೇಷನ್‌ನ ವಸಂತ್ ಮತ್ತಿತರರು ಇದ್ದರು. ಬಳಿಕ ಆಶ್ರಮದಲ್ಲಿನ ಹಿರಿಯರಿಗೆ ಮಧ್ಯಾಹ್ನದ ಭೋಜನವನ್ನು ಶಾಸಕರು ಬಡಿಸಿದರು. ಚೆಯ್ಯಂಡ ಸತ್ಯ ಸ್ವಾಗತಿಸಿದರು. ದಿನು ಕುಶಾಲಪ್ಪ ಪ್ರಾರ್ಥಿಸಿದರು. ಬನೀತ್ ಬೋಜಣ್ಣ ನಿರೂಪಿಸಿದರು, ಬಾಳೆಯಡ ದಿವ್ಯ ಮಾದಪ್ಪ ವಂದಿಸಿದರು.

ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವಲ್ಲಿ ತನಲ್ ಸಂಸ್ಥೆ ಮುಂದಾಗಿದೆ. ಆ ನಿಟ್ಟಿನಲ್ಲಿ ಹಲವು ವೃದ್ಧರು ಹಾಗೂ ಇತರರಿಗೆ ಕುಟುಂಬದವರನ್ನು ಹುಡುಕಿ ಮನೆಗೆ ಸೇರಿಸಲು ಪ್ರಯತ್ನಿಸಲಾಗಿದೆ. ಹಾಗೆಯೇ ಸಮಾಜಮುಖಿ ಕೆಲಸಗಳನ್ನು ಕೈಗೊಂಡು ಪುಣ್ಯ ಕೆಲಸ ಮಾಡಲಾಗುತ್ತಿದೆ.


-ಮಹಮ್ಮದ್ ಮುಸ್ತಪಾ

ತನಲ್ ಕೂರ್ಗ್ ಆಶ್ರಮ ಸಂಸ್ಥೆ ಅಧ್ಯಕ್ಷ