ಜೆರೋಸಾ ಶಾಲೆ ಪ್ರಕರಣ ತನಿಖೆ ಪೂರ್ಣ; ಅಂತಿಮ ವರದಿ ಶೀಘ್ರ ಸರ್ಕಾರಕ್ಕೆ

| Published : Feb 21 2024, 02:07 AM IST

ಸಾರಾಂಶ

ತನಿಖಾಧಿಕಾರಿ ಡಾ.ಆಕಾಶ್‌.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಮಂಗಳವಾರ ವಿಚಾರಣೆ ಪೂರ್ಣಗೊಳಿಸಿದ್ದಾರೆ. ತನಿಖಾ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಹೀಗಾಗಿ ಸರಿಯಾಗಿ ಹೇಳಿಕೆಗಳನ್ನು ಪರಿಶೀಲನೆ ಮಾಡಿ ಅಂತಿಮ ವರದಿ ಸಿದ್ಧಪಡಿಸಿ ಬಳಿಕ ಶೀಘ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತನಿಖಾಧಿಕಾರಿ ಆಗಿರುವ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್‌ ಹೇಳಿದ್ದಾರೆ.

ಮಂಗಳೂರಿನ ಡಿಡಿಪಿಐ ಕಚೇರಿಯಲ್ಲಿ ದಿನಪೂರ್ತಿ ವಿಚಾರಣೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು.

ಎರಡು ದಿನಗಳಿಂದ ಪ್ರಕರಣದ ಬಗ್ಗೆ ನಿರಂತರ ವಿಚಾರಣೆ ನಡೆಸಿದ್ದೇನೆ. ಸೋಮವಾರ ತಡರಾತ್ರಿಯವರೆಗೂ ಇದ್ದು ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದೆ. ಬಳಿಕ ಎಲ್ಲ ದೂರುದಾರರು, ಮನವಿ ಕೊಟ್ಟವರಿಗೆ ವಿಚಾರಣೆಗೆ ನೊಟೀಸ್ ಮಾಡಲಾಗಿತ್ತು. ಎಲ್ಲರನ್ನೂ ಕರೆಸಿ ಮಂಗಳವಾರ ಇಡೀ ದಿನ ಹೇಳಿಕೆ ಪಡೆಯಲಾಗಿದೆ. ಮಕ್ಕಳು ಕೂಡ ಆಗಮಿಸಿ ತಮ್ಮ ಹೇಳಿಕೆ ನೀಡಿದ್ದಾರೆ. ಪೋಷಕರ ಹೇಳಿಕೆ, ಮನವಿ ಕೊಟ್ಟಿವರ ಹೇಳಿಕೆ ಪಡೆಯಲಾಗಿದೆ. ಜೆರೋಸಾ ಶಾಲೆಗೂ ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದೇನೆ. ಬಹುತೇಕ ಎಲ್ಲರ ಹೇಳಿಕೆ ಪಡೆಯಲಾಗಿದೆ, ಬೇಕಾದರೆ ಮತ್ತೆ ಕರೆಸಿ ಹೇಳಿಕೆ ಪಡೆಯುತ್ತೇನೆ. ಎರಡು ದಿನಗಳಲ್ಲಿ ವಿಚಾರಣೆ ನಡೆಸಿ ವರದಿ ಕೊಡಲು ಅಸಾಧ್ಯ. ಹಾಗಾಗಿ ಇನ್ನೂ ಸ್ವಲ್ಪ ಮಾಹಿತಿ ಕಲೆ ಹಾಕಿ ಅಂತಿಮ ವರದಿ ಸಿದ್ಧಪಡಿಸುತ್ತೇನೆ. ವರದಿ ಸತ್ಯಾಸತ್ಯತೆ ಇರಬೇಕು ಎಂದವರು ತಿಳಿಸಿದ್ದಾರೆ.

ಶಾಸಕರು, ಇತರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಮಂಗಳೂರು: ಮಂಗಳೂರಿನ ಜೆರೋಸಾ ಶಾಲೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಕೇಸು ದಾಖಲಾಗಿ ಬಂಧನ ಭೀತಿ ಎದುರಿಸುತ್ತಿದ್ದ ಇಬ್ಬರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಸಂಘಟನೆ ಮುಖಂಡರಿಗೆ ಬೆಂಗಳೂರು ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಇವರಿಗೆ ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದೆ. ಅಲ್ಲದೆ ವಿಶ್ವ ಹಿಂದು ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌, ಮಹಾನಗರ ಪಾಲಿಕೆ ಸದಸ್ಯರಾದ ಸಂದೀಪ್‌ ಗರೋಡಿ ಹಾಗೂ ಭರತ್‌ ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಮಂಗಳವಾರ ಈ ಕುರಿತು ವಿಚಾರಣೆ ನಡೆದಿದ್ದು, ಅಂತಿಮ ಆದೇಶವನ್ನು ಫೆ.21ಕ್ಕೆ ಕಾಯ್ದಿರಿಸಲಾಗಿದೆ. ಶಾಸಕರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದ್ದರು.ತರಗತಿಯಲ್ಲಿ ಪಾಠ ವೇಳೆ ಹಿಂದು ನಿಂದನೆ ವಿರೋಧಿಸಿ ಪೋಷಕರ ಆಹ್ವಾನ ಮೇರೆಗೆ ಡಾ.ಭರತ್‌ ಶೆಟ್ಟಿ ಮತ್ತು ಶರಣ್‌ ಪಂಪ್‌ವೆಲ್‌ ಕೊಟ್ಟಾರ ಬಳಿ ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ನೇರವಾಗಿ ಶಾಲೆಗೆ ತೆರಳಿದ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಆವರಣದಲ್ಲಿ ಪೋಷಕರ ಜತೆಗೂಡಿ ಪ್ರತಿಭಟನೆ ನಡೆಸಿದ್ದರಲ್ಲದೆ, ಹಿಂದು ನಿಂದನೆ ಶಿಕ್ಷಕಿಯ ವಜಾಕ್ಕೆ ಪಟ್ಟು ಹಿಡಿದಿದ್ದರು. ಶಾಸಕರ ಒತ್ತಾಯಕ್ಕೆ ಮಣಿದ ಮುಖ್ಯಗುರುಗಳು ಶಿಕ್ಷಕಿಯನ್ನು ಅಮಾನತುಗೊಳಿಸಿದ್ದರು, ಈ ಬಗ್ಗೆ ಶಾಲಾ ಪೋಷಕ ಜೆರಾಲ್ಡ್‌ ಲೋಬೋ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಹಾಗೂ ಇತರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿತ್ತು.ನಂತರದ ಬೆಳವಣಿಗೆಯಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ರೈಸ್ತ ಸಂಘಟನೆಗಳು, ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜಾ ಮತ್ತಿತರರು ಸರ್ಕಾರಕ್ಕೆ ದೂರು ನೀಡಿ ಆಗ್ರಹಿಸಿದ್ದರು.