ಮೊಬೈಲ್‌ನಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆಯಿರಿ

| Published : Jul 09 2025, 12:17 AM IST / Updated: Jul 09 2025, 12:18 AM IST

ಸಾರಾಂಶ

ನಾವೆಲ್ಲರೂ ತಂದೆ- ತಾಯಿ- ಗುರು ಮತ್ತು ಸಮಾಜದ ಋಣವನ್ನು ತೀರಿಸಬೇಕಿದೆ.

ಭಟ್ಕಳ: ಶಿರಾಲಿಯ ಜನತಾ ವಿದ್ಯಾಲಯದ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಶಿರಾಲಿಯ ಗುರುನಮನ ಬಳಗದವರಿಂದ ಉಚಿತವಾಗಿ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರು ನಮನ ಬಳಗದ ಅಧ್ಯಕ್ಷ ಸಾಹಿತಿ- ಶಿಕ್ಷಕ ಶೀಧರ ಶೇಟ್ ಅವರು, ನಾವೆಲ್ಲರೂ ತಂದೆ- ತಾಯಿ- ಗುರು ಮತ್ತು ಸಮಾಜದ ಋಣವನ್ನು ತೀರಿಸಬೇಕಿದೆ. ನಮಗೆ ಇದೇ ಶಾಲೆಯಲ್ಲಿ 35-40 ವರ್ಷಗಳ ಹಿಂದೆ ಕಲಿಸಿದ ಗುರುಗಳ ಗೌರವಾರ್ಥ ಗುರುನಮನ ಬಳಗವನ್ನು ರಚಿಸಿಕೊಂಡು, ಗುರುಗಳಿಗೆ ಗುರುವಂದನೆ ಸಲ್ಲಿಸುವ ಜತೆಗೆ ಅವರ ಹೆಸರಿನಲ್ಲಿ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ಗುರುನಮನ ಬಳಗದ ಕಾರ್ಯದರ್ಶಿ ಮಂಜುನಾಥ ಕೋಡಿಹಿತ್ತಲು ಪ್ರಾಸ್ತಾವಿಕವಾಗಿ ಮಾತನಾಡಿ, ಗುರುನಮನ ಬಳಗ ಬೆಳೆದು ಬಂದ ದಾರಿ ವಿವರಿಸಿದರು.

ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಹೆಚ್ಚು ಅರ್ಥೈಸಿಕೊಳ್ಳಬಹುದು. ಹೀಗಾಗಿ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಹಕಾರ್ಯದರ್ಶಿ, ಪತ್ರಕರ್ತ ವಿಷ್ಣು ದೇವಡಿಗ ಮಾತನಾಡಿ, ಆಂಗ್ಲ ಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪರಿವಾರದ ಖಜಾಂಚಿ ರಾಮರಾಯ ಕಾಮತ ಶಾಲೆಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಜನತಾ ವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಹೆಗಡೆ, ಹಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿ ರಾಮಕೃಷ್ಣ ಪ್ರಭು ನೀಡಿದ ಕಂಪಾಸ್ ಬಾಕ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪರಿವಾರದ ಕಾರ್ಯದರ್ಶಿ ನಟರಾಜ್ ದೇವಡಿಗ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲೀಲಾವತಿ ಮೊಗೇರ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಆಶಾ ಭಟ್ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.