ಕಡ್ಡಾಯವಾಗಿ ಬೆಳೆ ವಿಮಾ ನೋಂದಣಿ ಮಾಡಿಸಿಕೊಳ್ಳಿ

| Published : Jun 02 2024, 01:46 AM IST

ಸಾರಾಂಶ

ಜಿಲ್ಲೆಯ ರೈತರು ಪ್ರಸಕ್ತ ವರ್ಷ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ರೈತರು ಪ್ರಸಕ್ತ ವರ್ಷ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಟಾನ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಟಾನ ಮಾಡಲು ಓರಿಯಂಟಲ್ ಜನರಲ್ ಇನ್ಯೂರೆನ್ಸ್ ಕಂಪನಿ ಲಿಮಿಟೆಡ್ ಕಂಪನಿಯನ್ನು ನಿಗದಿ ಮಾಡಲಾಗಿದೆ. ರೈತರು ನಿಗದಿತ ಅವಧಿಯೊಳಗೆ ತಾವು ಬೆಳೆಯುವ ಬೆಳೆಗಳನ್ನು ಹತ್ತಿರದ ಆರ್ಥಿಕ ಸಂಸ್ಥೆಗಳು, ಸಾರ್ವಜನಿಕ ಸೇವಾ ಕೇಂದ್ರ, ಬ್ಯಾಂಕ್ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.ಜಿಲ್ಲೆಯಾದ್ಯಾಂತ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ಕರಪತ್ರ, ಬ್ಯಾನರ್, ಆಟೋ ಪ್ರಚಾರ ಮೂಲಕ ವ್ಯಾಪಕ ಪ್ರಚಾರ ಮಾಡಿ ಹಿಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಇನ್ಯೂರೆನ್ಸ್ ಕಂಪನಿಯು ಜಿಲ್ಲೆಯಲ್ಲಿ ಕಚೇರಿ ತೆರೆಯುವುದರ ಜೊತೆಗೆ ಮತ್ತು ಎಲ್ಲಾ ತಾಲೂಕುಗಳಲ್ಲಿ ಒಬ್ಬರಂತೆ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ನಿಯೋಜಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರಿಗೆ ನಿರ್ದೇಶನ ನೀಡಿದರು.ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿ ಬೆಳೆ ನೋಂದಣಿಯಾದ ತಾಲೂಕುಗಳ ಮಾಹಿತಿ ಪಡೆದರು. ಕೃಷಿ ಸಹಾಯಕ ನಿರ್ದೇಶಕರಿಗೆ ನೋಂದಣಿ ಕಡಿಮೆಯಾಗಲು ಕಾರಣವೇನು ಎಂಬುದನ್ನು ತಿಳಿದುಕೊಂಡು, ಈ ಬಾರಿ ಹೆಚ್ಚು ರೈತರು ತಮ್ಮ ಬೆಳೆಗಳನ್ನು ನೋಂದಣಿ ಮಾಡಿಸುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿ ವಿಷಯದಲ್ಲಿ ಯಾವುದೇ ಬ್ಯಾಂಕ್‌ನ ಅಧಿಕಾರಿಗಳು ನಿರ್ಲಕ್ಷ ತೋರದೆ ತಮ್ಮ ಬ್ಯಾಂಕಿನ ಗ್ರಾಹಕರಲ್ಲದ ರೈತರಿಗೂ ಸಹ ನೋಂದಣಿ ಮಾಡಿಕೊಡಬೇಕು. ಒಂದು ವೇಳೆ ಯಾವುದಾದರೂ ಬ್ಯಾಂಕ್‌ನ ಅಧಿಕಾರಿಗಳು ನೋಂದಣಿ ಮಾಡದ ಪಕ್ಷದಲ್ಲಿ ಅವರಿಗೆ ನೋಟಿಸ್ ಕೊಡಲಾಗುವುದು. ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಸರ್ಕಾರ ಸೂಚಿಸಿರುವ ಶುಲ್ಕವನ್ನು ಹೊರತುಪಡಿಸಿ ಹೆಚ್ಚು ಸೇವಾ ಶುಲ್ಕವನ್ನು ರೈತರಿಂದ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.ಸರ್ಕಾರದ ಮಾರ್ಗ ಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುತ್ತದೆ. ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಿಂದ ಕೈ ಬಿಡಲು ಇಚ್ಛಿಸಿದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ೭ ದಿನಗಳ ಮುಂಚಿತವಾಗಿ, ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.ವಿಮಾಕಂತು ಪಾವತಿಸಲು ಜುಲೈ ೩೧ ಕಡೆ ದಿನವಾಗಿದ್ದು, ರೈತರು ಪಹಣಿ, ಕಂದಾಯ ರಶೀದಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಜೊತೆಗೆ ನೋಂದಣಿ ಮಾಡಿಸುವಂತೆ ಕೃಷಿ ಜಂಟಿ ನಿರ್ದೇಶಕ ರಮೇಶ್ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್, ಎಲ್ಲಾ ತಾಲ್ಲೂಕು ಸಹಾಯಕ ನಿರ್ದೇಶಕರು, ಇನ್ಯೂರೆನ್ಸ್ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.