ಗ್ಯಾರಂಟಿಗಳ ಸದುಪಯೋಗ ಪಡೆಯಿರಿ: ಬೈರತಿ ಸುರೇಶ್‌

| Published : Feb 29 2024, 02:01 AM IST / Updated: Feb 29 2024, 01:32 PM IST

ಸಾರಾಂಶ

ಹೆಬ್ಬಾಳ ಕ್ಷೇತ್ರದಲ್ಲಿ ಜನ ಸಂಪರ್ಕ ಸಭೆ ನಡೆಸಿದ ಶಾಸಕ ಬೈರತಿ ಸುರೇಶ್‌, ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಕರೆ ನೀಡಿದರು.

ಬುಧವಾರ ಆರ್.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2023ರ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳು ಅನುಷ್ಠಾನಕ್ಕೆ ತಂದಿದ್ದಾರೆ.

 ಇದಕ್ಕಾಗಿ ₹49 ಸಾವಿರ ಕೋಟಿ ಮೀಸಲಿಟ್ಟು ವ್ಯಯಿಸಲಾಗಿದೆ. 2024-25 ಬಜೆಟ್‌ನಲ್ಲಿ ₹52 ಸಾವಿರ ಕೋಟಿ ಮೀಸಲಿಡಲಾಗಿದೆ. ಹೆಬ್ಬಾಳ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಜನತೆ ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ 8 ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಸಲಾಗುವುದು. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಟ್ಯಾಂಕರ್‌ ನೀರನ್ನು ಒದಗಿಸಲಾಗುವುದು. 

ಕ್ಷೇತ್ರದ ಹಲವು ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಬದಲಾಗಲಿವೆ. ಚರಂಡಿ ದುರಸ್ತಿ ಬಹುತೇಕ ಮುಗಿದಿದ್ದು ಕಳಪೆ ಕಾಮಗಾರಿ ಕಂಡಲ್ಲಿ ನೇರವಾಗಿ ತಿಳಿಸಿ ಎಂದರು.

ಈ ವೇಳೆ ವಿವಿಧ ಇಲಾಖೆಗಳ 15 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮ ಇದಾಗಿತ್ತು.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾದ್‌, ಬಿಬಿಎಂಪಿ ವಲಯ ಆಯುಕ್ತರಾದ ಆರ್. ಸ್ನೇಹಲ್, ಬಿಬಿಎಂಪಿ ಜಂಟಿ ಆಯುಕ್ತರಾದ ಪಲ್ಲವಿ, ಉಪ ಪೊಲೀಸ್ ಆಯುಕ್ತ ಸೈದುಲ್ ಅತಾವತ್, ಉಪ ತಹಸಿಲ್ದಾರ್ ವೆಂಕಟೇಶ, ಆರೋಗ್ಯ ಅಧಿಕಾರಿ ಡಾ. ಸವಿತಾ, ಬೆಸ್ಕಾಂ ಕಾರ್ಯ ನಿರ್ವಹಕ ಅಭಿಯಂತರ ಚಂದ್ರಶೇಖರ್ ಇದ್ದರು.