ಸಾರಾಂಶ
ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಏರ್ಪಡಿಸಿರುವ 4 ದಿನಗಳ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಥಳಗಳನ್ನು ಪುಸ್ತಕಗಳಲ್ಲಿ ಗುರುತು ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಸಲಹೆ ನೀಡಿದರು.
ಎಸ್.ಟಿ, ಎಸ್.ಸಿ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ 4 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರ ಹಾಗೂ ಶಿಕ್ಷಣ ಇಲಾಖೆ ಏರ್ಪಡಿಸಿರುವ 4 ದಿನಗಳ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಥಳಗಳನ್ನು ಪುಸ್ತಕಗಳಲ್ಲಿ ಗುರುತು ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಸಲಹೆ ನೀಡಿದರು.
ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ತಾಲೂಕಿನ 11 ಶಾಲೆಗಳ ಪ.ವರ್ಗ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ 4 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು. ಎಲ್ಲಾ ಮಕ್ಕಳಿಗೆ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗುವುದಿಲ್ಲ. ಸರ್ಕಾರ ನೀಡಿದ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ವಾಸ್ತು ಕಲೆ ಇರುವ ಹಂಪೆಯಂತಹ ಸ್ಥಳ ನೋಡುವ ಭಾಗ್ಯ ನಿಮ್ಮದಾಗಿದೆ. ಯಾವ ರಾಜರು ಆಳ್ವಿಕೆ ಮಾಡಿದ್ದರು ಎಂಬ ವಿಚಾರ ನಿಮಗೆ ತಿಳಿಯಲಿದೆ. ಪಠ್ಯ ಪುಸ್ತಕದ ಹೊರತಾಗಿ ಹೊಸ ಅನುಭವ ನಿಮ್ಮದಾಗಲಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ಪ್ರವಾಸ ಏರ್ಪಡಿಸಿದೆ. 8 ಸರ್ಕಾರಿ ಶಾಲೆ ಹಾಗೂ 3 ವಸತಿ ಶಾಲೆ ಸೇರಿ 11 ಶಾಲೆಗಳ 47 ಮಕ್ಕಳು 4 ದಿನಗಳ ಕಾಲ ಹಂಪೆ, ಚಿತ್ರದುರ್ಗ, ಹೊಸಪೇಟೆ, ಐಹೊಳೆ, ಬಾದಾಮಿ, ಪಟ್ಟದ ಕಲ್ಲು, ಶಿರಸಿ, ಬನವಾಸಿ ಪ್ರವಾಸ ಮಾಡಲಿದ್ದಾರೆ. ದೇಶ ಸುತ್ತಬೇಕು ಅಥವಾ ಕೋಶ ಓದಬೇಕು ಎಂಬ ಗಾದೆ ಮಾತಿದೆ. ಇಂತಹ ಐತಿಹಾಸಿಕ ಸ್ಥಳಗಳನ್ನು ಸಂತೋಷದಿಂದ ನೋಡಿಕೊಂಡು ಬನ್ನಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ವಸೀಂ, ಇಸಿಒ ಗಳಾದ ರಂಗಪ್ಪ, ಸಂಗೀತ, ಸಿ.ಆರ್.ಪಿ. ಗಳಾದ ಓಂಕಾರಪ್ಪ, ದೇವರಾಜ್ ಹಾಗೂ ಮಕ್ಕಳ ಪ್ರವಾಸದ ಜೊತೆ ಹೋಗಲಿರುವ ಶಿಕ್ಷಕರಾದ ನೀಲಮ್ಮ, ಕೃಷ್ಣಮೂರ್ತಿ ಇದ್ದರು.