ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಗೆ ಪಟ್ಟಣದ ಕೊಳಚೆ ನೀರು ಸೇರ್ಪಡೆಯಾಗಿ ಜನ - ಜಾನುವಾರುಗಳಲ್ಲಿ ರೋಗಗಳು ಹರಡುವ ಆತಂಕ ಎದುರಾಗಿದೆ ಎಂದು ಆರೋಪಿಸಿ ಹಿರೆಮರಳಿ ಗ್ರಾಮಸ್ಥರು ಪಟ್ಟಣದ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ನಂ.3 ವಿ.ಸಿ.ನಾಲಾ ವಿಭಾಗದ ಎದುರು ಸೇರಿದ ಪ್ರತಿಭಟನಾಕಾರರು, ಪಟ್ಟಣದ ವಿವಿಧ ಬಡಾವಣೆಗಳ ತ್ಯಾಜ್ಯದ ಕಲುಷಿತ ನೀರು ವಿಶ್ವೇಶ್ವರಯ್ಯ ನಾಲೆ ಸೇರ್ಪಡೆಗೊಂಡು ನಾಲೆ ದೊಡ್ಡ ಕೊಳಚೆಗುಂಡಿಯಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ವಿ.ಸಿ.ನಾಲೆಯಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ನೀರು ಹರಿಯದ ಕಾರಣ ಇಡೀ ಪಾಂಡವಪುರ ಪಟ್ಟಣದ ವಿವಿಧ ಬಡಾವಣೆಗಳ ತ್ಯಾಜ್ಯ ನೀರು ನಾಲೆಗೆ ಹರಿದು ಬರುತ್ತಿದೆ. ಕೊಳಚೆ ನೀರು ಕಾವೇರಿ ನೀರಿನಲ್ಲಿ ಸೇರಿಕೊಂಡು ಜನ - ಜಾನುವಾರುಗಳು ಹಲವು ಕಾಯಿಲೆಗಳಿಗೆ ತುತ್ತಾಗುವ ಆತಂಕ ಎದುರಾಗಿದೆ ಎಂದು ಕಿಡಿಕಾರಿದರು.ವಿಸಿ ನಾಲೆಯು ದೊಡ್ಡದಾದ ಮೋರಿಯಂತಾಗಿದೆ. ಕಲುಷಿತ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಪಟ್ಟಣದ ಕಲುಷಿತ ನೀರು ನಾಲೆ ನೀರಿನೊಂದಿಗೆ ಸೇರುತ್ತಿದೆ. ಆ ಮೂಲಕ ಜನ ಜಾನುವಾರುಗಳ ಆರೋಗ್ಯ ಕೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದೆ. ಹಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಹಾಗಾಗಿ ಚರಂಡಿ ನೀರು ಹರಿದುಹೋಗಲು ಬದಲಿ ವ್ಯವಸ್ಥೆ ಮಾಡಿ ನಾಲೆಯ ಆರೋಗ್ಯ ಕಾಪಾಡಬೇಕೆಂದು ಆಗ್ರಹಿಸಿದರು.ಬಳಿಕ ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ, ಚರಂಡಿ ನೀರು ನಮ್ಮ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಗೆ ಸೇರದಂತೆ ಪುರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವೀಣಾರವರು, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ನಡೆಯದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ ಪಟ್ಟಣದ ಕಳಸಪ್ಪನ ತೋಟಕ್ಕೆ ಪಟ್ಟಣದ ತ್ಯಾಜ್ಯ ನೀರನ್ನು ಹರಿಸಿ ವಿಶ್ವೇಶ್ವರಯ್ಯ ನಾಲೆಗೆ ಕಲುಷಿತ ನೀರು ಸೇರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಶ್ರೀನಿವಾಸ್ ನಾಯಕ್, ಗ್ರಾಪಂ ಉಪಾಧ್ಯಕ್ಷ ಯಶ್ವಂತ್, ಶಿವಕುಮಾರ್, ದೊರೆಸ್ವಾಮಿ, ಕನಗನಮರಡಿ ನಾಗರಾಜು, ಹೌಸಿಂಗ್ ಬೋರ್ಡ್ ನಿರ್ದೇಶಕ ಭಾಸ್ಕರ್, ರವಿಕುಮಾರ್, ಜಲೇಂದ್ರ, ಪುರಸಭೆ ಮ್ಯಾನೇಜರ್ ಮಂಜುಳ, ದೊರೆಸ್ವಾಮಿ, ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.