ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ಪ್ರತಿವರ್ಷ ಬೇಸಿಗೆ ಬಂದರೆ ಈ ಭಾಗದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ- ಪಕ್ಷಿಗಳು ಕುಡಿಯಲು ಹನಿ ನೀರಿಗೂ ಪರದಾಡುತ್ತವೆ. ಈ ಸಮಸ್ಯೆ ಪರಿಹಾರಕ್ಕೆ ಗಜಾಪುರ ಗ್ರಾಮದ ಯುವಕರು ಮುಂದಾಗಿದ್ದು, ಊರ ಪಕ್ಕದ ಅರಣ್ಯ ಪ್ರದೇಶದಲ್ಲಿ ಕಳೆದ 4 ವರ್ಷಗಳಿಂದ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದಾರೆ.ಸೋಮವಾರ ರೈತರ ಪಂಪ್‌ಸೆಟ್‌ನಿಂದ ನೀರನ್ನು ಟ್ಯಾಂಕರ್ ಮೂಲಕ ತಂದು ಕಾಡಿನಲ್ಲಿರುವ ಕಲ್ಲುಬಂಡೆಗಳ ಮಧ್ಯೆ ಇರುವ ತಗ್ಗು ಪ್ರದೇಶಕ್ಕೆ ಹಾಕಿದರು. ಆ ಮೂಲಕ ಪ್ರಾಣಿ- ಪಕ್ಷಿಗಳ ದಾಹ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ ಗಜಾಪುರ ಗ್ರಾಮದ ತಳವಾರ ಶಿವರಾಜ್ ಮತ್ತು ಆತನ ಸ್ನೇಹಿತರು. ಈ ಕಾರ್ಯ ಬೇಸಿಗೆ ಮುಗಿಯುವ ವರೆಗೂ ನಡೆಯಲಿದೆ ಎನ್ನುತ್ತಾರೆ ಯುವಕರು.
ಗಜಾಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಅಂಕನಡೋಣಿ ಬಂಡೆಗಲ್ಲಿನ ಪ್ರದೇಶದಲ್ಲಿ ನೀರು ನಿಲ್ಲಲು ಬಾವಿಯಾಕಾರದ ನಾಲ್ಕಾರು ಬಂಡೆಗಳಿವೆ. ಅಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿದರೆ ಕಾಡುಪ್ರಾಣಿಗಳ ದಾಹ ನೀಗುತ್ತದೆ. ಈ ಪ್ರದೇಶ ಕಾಡಿನ ಮಧ್ಯೆ ಭಾಗದಲ್ಲಿರುವುದರಿಂದ ಪ್ರಾಣಿ- ಪಕ್ಷಿಗಳು ನೀರಿನ ದಾಹ ಇಂಗಿಸಿಕೊಳ್ಳಲು ಈ ಪ್ರದೇಶ ಸೂಕ್ತವಾಗಿದೆ.ಚಿರಿಬಿ ಅರಣ್ಯ ಪ್ರದೇಶ ಗಜಾಪುರದಿಂದ ಕೊಟ್ಟೂರು, ಚಿರಿಬಿವರೆಗೂ ವ್ಯಾಪಿಸಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದೆ. ಆದರೆ ಬೇಸಿಗೆಯಲ್ಲಿ ಪ್ರಾಣಿ- ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಒಂದು ಟ್ಯಾಂಕರ್ ನೀರಿಗೆ ಸಾವಿರ ರುಪಾಯಿ ಬಾಡಿಗೆ ನೀಡಿ ತಂದು ಪ್ರಾಣಿಗಳಿಗೆ ನೀರು ಒದಗಿಸುವ ಶಿವರಾಜ ಅವರ ಮಾನವೀಯ ಕಳಕಳಿಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಡಿನಲ್ಲಿರುವ ಕಾಡು ಹಂದಿ, ಚಿರತೆ, ಕರಡಿ, ಮೊಲ ಮುಂತಾದ ಪ್ರಾಣಿಗಳು ಹಾಗೂ ಅಸಂಖ್ಯಾತ ಪಕ್ಷಿಗಳ ದಾಹ ತೀರಿಸಿದಂತಾಗುತ್ತದೆ. ಗ್ರಾಮಸ್ಥರ ಸಹಕಾರ: ಕಳೆದ ನಾಲ್ಕು ವರ್ಷಗಳಿಂದ ನಾನು ಮತ್ತು ಸ್ನೇಹಿತರು ಕಾಡಿನಲ್ಲಿ ಬೇಸಿಗೆ ವೇಳೆ ಟ್ಯಾಂಕರ್ ಮೂಲಕ ಅಂಕನಡೋಣಿ ಪ್ರದೇಶಕ್ಕೆ ಹೋಗಿ ನೀರು ಹಾಕುತ್ತಾ ಬಂದಿದ್ದೇವೆ. ಟ್ಯಾಂಕರ್ ಬಾಡಿಗೆಗೆ ಸಾವಿರಾರು ರುಪಾಯಿ ಖರ್ಚಾದರೂ ನಾವೇ ಹಾಕಿಕೊಳ್ತಿವಿ. ಗ್ರಾಮಸ್ಥರು ಹಣ ಕೊಡಲು ಮುಂದೆ ಬರುತ್ತಿದ್ದಾರೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈಜೋಡಿಸುವುದು ಹೆಮ್ಮೆ ಅನಿಸಿದೆ ಎಂದು ಗಜಾಪುರ ಗ್ರಾಮದ ಯುವಕ ತಳವಾರ ಶಿವರಾಜ ತಿಳಿಸಿದರು.ಮಾದರಿ ಕಾರ್ಯ: ನಮ್ಮೂರಿನ ಸುತ್ತಮುತ್ತ ಸಹಸ್ರಾರು ಹೆಕ್ಟೇರ್ ಅರಣ್ಯ ಇದೆ. ಇಲ್ಲಿ ಸಹಸ್ರಾರು ಪ್ರಾಣಿಗಳು, ಅಸಂಖ್ಯಾತ ಪಕ್ಷಿಗಳು ವಾಸಿಸುತ್ತಿದ್ದು, ಬೇಸಿಗೆಯಲ್ಲಿ ನೀರು ಕಾಡಿನಲ್ಲಿ ಖಾಲಿಯಾಗುವುದರಿಂದ ನಮ್ಮೂರಿನ ಯುವಕರು ಕಾಡಿನ ಪ್ರಾಣಿ- ಪಕ್ಷಿಗಳಿಗೆ ನೀರಿನ ಸೇವೆ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಗಜಾಪುರ ಗ್ರಾಪಂ ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ ತಿಳಿಸಿದರು.