ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾಹಿತ್ಯ ಕ್ಷೇತ್ರಕ್ಕೆ ‘ಜಾನಪದ ಸಾಹಿತ್ಯ’ ಭದ್ರ ಬುನಾದಿಯಾಗಿದೆ. ಇದನ್ನು ಅರ್ಥೈಸಿಕೊಂಡು ಸರ್ಕಾರಗಳು ಜಾನಪದ ಸಾಹಿತ್ಯದಲ್ಲಿ ಎಂ.ಎ.ಪಡೆದವರಿಗೆ ಕನ್ನಡ ಪ್ರಾಧ್ಯಾಪಕ ಹುದ್ದೆಗಳ ದೊರಕುವಂತೆ ಮಾಡಬೇಕು ಎಂದು ಶ್ರೀಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಡಾ.ಕ್ಯಾತನಹಳ್ಳಿ ರಾಮಣ್ಣ ಅಭಿನಂದನಾ ಸಮಿತಿಯಿಂದ ನಡೆದ ಜಾನಪದ ತಜ್ಞ, ಲೇಖಕ ಡಾ.ಕ್ಯಾತನಹಳ್ಳಿ ರಾಮಣ್ಣರಿಗೆ ಅಭಿನಂದನೆ ಹಾಗೂ ಜಾನಪದ ತಿಳಿಜಲ ಗೌರವಗ್ರಂಥ ಸಮರ್ಪಣೆ-ಮೂರು ಕೃತಿಗಳ ಲೋಕಾರ್ಪಣೆ’ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಜಾನಪದ ಸಾಹಿತ್ಯದಲ್ಲಿ ಎಂ.ಎ.ಪಡೆದವರಿಗೆ ಕನ್ನಡ ಪ್ರಾಧ್ಯಾಪಕರ ಹುದ್ದೆಗಳು ದೊರೆಯುತ್ತಿಲ್ಲ. ಸರ್ಕಾರಗಳು ಪರಿಶೀಲಿಸಿ ಜಾನಪದ ಸಾಹಿತ್ಯ ಓದಿಕೊಂಡವರಿಗೂ ಕನ್ನಡ ಪಾಧ್ಯಾಪಕರಾಗಿ ಪಾಠ ಮಾಡುವ ಅವಕಾಶಗಳನ್ನು ದೊರಕಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ನಾಗರಿಕರ ಸಹಜ ಮಾತುಗಳು, ಜನರ ಹೃದಯದಿಂದ ಹುಟ್ಟುವ ಜಾನಪದ ಸಾಹಿತ್ಯವು ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಒಂದು ಜಾನಪದ ಹಾಡು ಮನುಷ್ಯನ ಮನಸ್ಸನ್ನು ಮೃದುಗೊಳಿಸುತ್ತದೆ. ಇಂತಹ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.
ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಅವರು ಮಿತಭಾಷಿ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು. ಜೊತೆಗೆ ಹಿಂಜರಿಕೆಯ ಮನೋಭಾವ ರೂಢಿಸಿಕೊಂಡಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕ್ಷೇತ್ರ ಕಾರ್ಯಾಚರಣೆ ಮಾಡಿ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಅಪಾರಕೊಡುಗೆ ನೀಡಿದ್ದಾರೆ ಎಂದರು.
ಕ್ಯಾತನಹಳ್ಳಿ ರಾಮಣ್ಣರಿಗೆ ಜಾನಪದ ಸಾಹಿತ್ಯದಲ್ಲಿ ಮಾಡಿದ ಸಾಧನೆಗೆ ದೊರೆಯಬೇಕಾದ ಗೌರವಗಳು ದೊರೆಯಲು ಸಾಧ್ಯವಾಗಿಲ್ಲ. ಬಹುಶಃ ರಾಮಣ್ಣ ಅವರು ಸಂಕೋಚನದಲೇ ಇಷ್ಟೊಂದು ದೊಡ್ಡ ಜಾನಪದ ಸಾಹಿತಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ಶ್ರೀನಿಶ್ವಲಾನಂದನಾಥ ಸ್ವಾಮೀಜಿ ಮಾತನಾಡಿ, ಕ್ಯಾತನಹಳ್ಳಿ ರಾಮಣ್ಣ ಅವರು ಕ್ಷೇತ್ರ ಕಾರ್ಯಾಚರಣೆ ಮಾಡುವ ಮೂಲಕ ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಲವು ಕೃತಿಗಳನ್ನು ರಚಿಸಿದ್ದಾರೆ ಎಂದರು.ಇತ್ತೀಚಿನ ದಿನಗಳಲ್ಲಿ ಕ್ಷೇತ್ರ ಕಾರ್ಯಾಚರಣೆ ನಡೆಸುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಸರ್ಕಾರಗಳು ರಾಮಣ್ಣ ಅವರು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ರಚಿಸಿರುವ ಕೃತಿಗಳನ್ನು ಪಡೆದು ಎಲ್ಲಾ ಶಾಲೆಗಳು ಗ್ರಂಥಾಲಯಗಳಿಗೆ ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಜಾನಪದ ಸಾಹಿತ್ಯ ಕ್ಷೇತ್ರ ನಾಡಿಗೆ ಅಪಾರಕೊಡುಗೆ ನೀಡಿದೆ. ರಾಮಣ್ಣ ಅವರು ಜಾನಪದ ಸಾಹಿತ್ಯ ನಿಗಂಟು, ಕೃತಿಗಳನ್ನು ನೀಡುವ ಮೂಲಕ ಕೊಡುಗೆ ಕೊಟ್ಟಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಮೊದಲ ಡಾಕ್ಟರೇಟ್ ಪಡೆದ ಕ್ಯಾತನಹಳ್ಳಿ ರಾಮಣ್ಣರ ಸೇವೆ ಅಪಾರವಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಜಾನಪದ ವಿಶ್ವವಿದ್ಯಾಲಯಗಳು ಮುಚ್ಚು ಹೋಗುತ್ತಿವೆ. ಇವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ರಾಜ್ಯ, ಕೇಂದ್ರ ಸರ್ಕಾರಗಳು ಮಾಡಬೇಕಾಗಿದೆ. ಎಂಎಲ್‌ಎ, ಎಂಪಿಗಳು ಸಹ ಈ ಬಗ್ಗೆ ಸರ್ಕಾರಗಳಿಗೆ ಹೆಚ್ಚು ಒತ್ತಡ ತರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಾತ್ಯನಹಳ್ಳಿಯ ಮಣ್ಣು ಜಾನಪದ ವಿದ್ವಾಂಸ ರಾಮಣ್ಣ, ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ಹಲವು ಪ್ರಸಿದ್ಧ ನಾಯಕರು, ಕ್ರೀಡಾಪಟುಗಳಿಗೆ ಜನ್ಮ ನೀಡಿದೆ. ಸಾಹಿತ್ಯ ಕ್ಷೇತ್ರಕ್ಕೆ ಒತ್ತು ನೀಡುವ ಉದ್ದೇಶದಿಂದ ನಾನು ಮೊದಲ ಬಾರಿ ಶಾಸಕನಾದಾಗ ಪಾಂಡವಪುರದಲ್ಲಿ ಒಂದು ತಿಂಗಳಕಾಲ ಕನ್ನಡ ಹಬ್ಬವನ್ನು ಆಚರಣೆ ಮಾಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇನೆ ಎಂದರು.ಈ ವೇಳೆ ಕ್ಯಾತನಹಳ್ಳಿ ರಾಮಣ್ಣರ ಜಾನಪದ ತಿಳಿಜಲ ಅಭಿನಂದನೆ ಗ್ರಂಥ ಹಾಗೂ ಮೂರು ಕೃತಿಗಳನ್ನು ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಸೇರಿದಂತೆ ವೇದಿಕೆ ಮೇಲಿನ ಗಣ್ಯರು ಬಿಡುಗಡೆ ಮಾಡಿದರು. ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಅವರು ಅಭಿನಂಧ ಗ್ರಂಥದ ಕುರಿತು ಮಾತನಾಡಿದರು. ಇದೇ ವೇಳೆ ಕ್ಯಾತನಹಳ್ಳಿ ರಾಮಣ್ಣ ಮತ್ತು ದಂಪತಿಗಳನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಹೋರಾಟಗಾರರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಡಾ.ಚಿಕ್ಕಮರಳಿ ಬೋರೇಗೌಡ, ಕೀಲಾರ ಕೃಷ್ಣೇಗೌಡ, ಉಷಾ ಸೇರಿದಂತೆ ಹಲವರು ಹಾಜರಿದ್ದರು.