ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಇಳುವರಿ ಪಡೆಯಿರಿ: ಡಾ.ರವೀಂದ್ರ ಬೆಳ್ಳಿ

| Published : Dec 29 2023, 01:30 AM IST

ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಇಳುವರಿ ಪಡೆಯಿರಿ: ಡಾ.ರವೀಂದ್ರ ಬೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ತಿಳಿವಳಿಕೆ ನೀಡಿ ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಇಳುವರಿ ಪಡೆಯಲು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತೊಗರಿ ಈ ಭಾಗದಲ್ಲಿ ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿದ್ದು, ರೈತರು ಅಧುನಿಕ ತಂತ್ರಜ್ಞಾನ ಮೂಲಕ ಅಧಿಕ ಇಳುವರಿ ಪಡೆಯಬೇಕು ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.

ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಜೇಂದ್ರ ಕೋರಡ್ಡಿ ಅವರ ಹೊಲದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆ ಹಾಗೂ ಶ್ರೀ ಬನಶಂಕರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಧಾರಿತ ಜಿಆರ್‌ಜಿ ೧೫೨ ತೊಗರಿ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಹಿಂದೆ ಸಾಂಪ್ರದಾಯಿಕ ತೊಗರಿ ತಳಿ ಬಿತ್ತನೆ ಮಾಡುತ್ತಿದ್ದರು. ಇದು ಗೊಡ್ಡುರೋಗಕ್ಕೆ ತುತ್ತಾಗಿ ಇಳುವರಿ ಕುಂಠಿತವಾಯಿತು. ಈಗ ಸುಧಾರಿತ ತಳಿ ಬೆಳೆಯುವುದರಿಂದ ರೋಗನಿರೋಧಕ ಶಕ್ತಿ ಹೊಂದಿದೆ. ಅಲ್ಲದೇ ಅಧಿಕ ಇಳುವರಿ ಕೊಡುತ್ತದೆ. ಬರುವ ಜನವರಿ ೮ ರಿಂದ ೧೦ ರ ವರೆಗೆ ಹಿಟ್ಟಿನಹಳ್ಳಿ ಫಾರ್ಮನಲ್ಲಿ ಕೃಷಿಮೇಳ ಜರುಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆಯಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಮಾತನಾಡಿ, ಹಿಂದೆ ರೈತರು ಮುಂಗಾರಿಯಲ್ಲಿ ಸೂರ್ಯಕಾಂತಿ ಬೆಳೆಯುತ್ತಿದ್ದರು. ಕ್ರಮೇಣ ಈ ಬೆಳೆಗೆ ಕಂಬಳಿ ಹುಳು ಹಾಗೂ ಬೂದಿರೋಗಕ್ಕೆ ತುತ್ತಾಗಿದ್ದರಿಂದ ತೊಗರಿ ಬೆಳೆ ಬೆಳೆಯಲು ಪ್ರಾರಂಭಿಸಿದರು. ಈಗ ಜಿಲ್ಲೆಯಲ್ಲಿ ೧೧ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ತೊಗರಿ ಬೆಳೆಯುತ್ತಿದ್ದಾರೆ. ತೊಗರಿ ಬೆಳೆಗೆ ಬರುವ ವಿವಿಧ ಕೀಟ, ರೋಗಗಳು, ಜೈವಿಕ ನಿಯಂತ್ರಣ ಕ್ರಮ ಬಗೆ ತಿಳಿಬೇಕು ಎಂದರು.

ಕೃಷಿ ಅಧಿಕಾರಿ ಜಯಪ್ರದಾ ದಶವಂತ ಮಾತನಾಡಿ, ರೈತರಿಗೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿ, ಇಲಾಖೆಯಿಂದ ಹಮ್ಮಿಕೊಂಡ ಪ್ರಾತ್ಯಕ್ಷಿಕೆಯನ್ನು ಕ್ಷೇತ್ರೋತ್ಸವ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೈತರು ಕೃಷಿಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಕೃಷಿ ಸಂಜೀವಿನಿ ಯೋಜನೆಯಡಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.

ಹಿಟ್ನಳ್ಳಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಾಂತ ಚೌಧರಿ ಮಾತನಾಡಿ, ರೈತರು ವಿಜ್ಞಾನಿಗಳ ಮಾರ್ಗದರ್ಶನದಂತೆ ಬೆಳೆ ಬೆಳೆಯಬೇಕು, ತೊಗರಿ ಬೆಳೆದನಂತರ ಅದನ್ನೇ ಮತ್ತೆ ಬೆಳೆಯಬಾರದು. ಈ ಭಾಗದಲ್ಲಿ ಕಾಲುವೆ ನೀರು ಬರುತ್ತಿದ್ದು, ಪ್ರತಿ ರೈತರು ಕೃಷಿ ಹೊಂಡ ನಿರ್ಮಿಸಿ, ಬೆಳೆಯ ಸಂದಿಗ್ಧ ಹಂತದಲ್ಲಿ ಉಪಯೋಗಿಸಿ ಬೆಳೆ ಬೆಳೆಯಲು ಸಲಹೆ ನೀಡಿದರು. ಗುರುನಿಂಗಪ್ಪ ನಾಟೀಕಾರ ಮಾತನಾಡಿ, ತೊಗರಿ ಬೆಳೆಯ ಜೊತೆಗೆ ಇತರ ಬೆಳೆಗಳನ್ನು ಬೆಳೆದು ಲಾಭ ಗಳಿಸಬೇಕು ಎಂದರು.

ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಪ್ಪ ಮುದೂರ, ಪಿ.ಕೆ.ಪಿ.ಎಸ್ ವ್ಯವಸ್ಥಾಪಕ ಎಂ.ಆರ್‌.ನಾಗಶೆಟ್ಟಿ, ಕೃಷಿ ಇಲಾಖೆ ಸಿಬ್ಬಂದಿ ಆರ್‌.ವಿ.ನಾಯಕ, ಸಂತೋಷ ರಾಠೋಡ, ಮುದಕಪ್ಪ ಯಾಳವಾರ, ಪ್ರಗತಿಪರ ರೈತ ಮುದುಕಾ ಚಿತ್ತಾಪೂರ, ಗೌಡಪ್ಪ ಬಬಲೇಶ್ವರ, ಮುರಳೀದರ ಭಾವಿಕಟ್ಟಿ, ಸುಭಾಶ ಚಂದ್ರ ಯಂಬತ್ನಾಳ, ಅಪ್ಪಾಸಾಹೇಬ ಹೊಸೂರ, ಸದಾಶಿವ ಸಿಂಗೆಗೋಳ, ಶ್ರೀವಾಣಿ ಕುಲಕರ್ಣಿ, ಶ್ರೀ ದೇಶಪಾಂಡೆ, ಕ್ಷೇತ್ರೋತ್ಸವದಲ್ಲಿ ಹಿಟ್ಟಿನಹಳ್ಳಿ, ಉತ್ನಾಳ ಗ್ರಾಮದ ರೈತರು ಇದ್ದರು.