ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಿಳೆಯರು ಗರ್ಭಾವಸ್ಥೆಯಲ್ಲೇ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಮಕ್ಕಳಿಗೆ ಬರಬಹುದಾದ ಅಂಗವಿಕಲತೆ ತಡೆಯಬಹುದು. ಆದ್ದರಿಂದ ಪ್ರತಿ ತಾಯಿಯೂ ನಿರ್ಲಕ್ಷ್ಯ ವಹಿಸದೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸಲಹೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭ ಧರಿಸಿದ ತಾಯಂದಿರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಹುಟ್ಟಿನಿಂದ ಸಂಭವಿಸಬಹುದಾದ ಕೆಲವು ರೀತಿಯ ವಿಕಲಾಂಗತೆಯನ್ನು ತಡೆಯಬಹುದು ಎಂದು ಹೇಳಿದರು.ಅಂಗವೀಕಲರು ವಿಶೇಷಚೇತನರು. ಇತರಿರಿಗಿಂತ ವಿಶೇಷರು. ದೊಡ್ಡತನ ನಿಮ್ಮಲ್ಲಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೇಳೆಯಲು ನಿರ್ಧರಿಸಬೇಕು. ಪೋಷಕರು ಸಹ ಇತರ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡದೇ ಧೈರ್ಯ, ಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಭಗವಂತನ ಸೃಷ್ಟಿಯೇ ಮಾನವ. ಎಲ್ಲ ಅಂಗಾಂಗ ಹೊಂದಿಯೂ ಸಹಿತ ಏನೂ ಸಾಧನೆ ಮಾಡದೇ ಸಾವಯುವವರು ನಿಜವಾದ ಅಂಗವಿಕಲರು. ಇಲ್ಲಿ ನೆರೆದಿರುವ ಎಲ್ಲ ವಿಕಲಚೇತನರು ವಿಶೇಷ ಚೇತನರು. ನಿಮ್ಮಲ್ಲಿ ಸಾಧಿಸಬೇಕೆಂಬ ಮನಸ್ಸಿದೆ. ಹುಮ್ಮಸ್ಸಿದೆ. ಬಾಯಿದ್ದು ಮೂಗರು, ಕಣ್ಣಿದ್ದು ಕುರುಡರು ಹೀಗೆ ಎಲ್ಲ ಇದ್ದು ಇಲ್ಲದಂತಿರುವವರ ಮುಂದೆ ನೀವೇ ವಿಶೇಷರು ಎಂದು ಹೇಳಿದರು.ಕಿವಿ ಸಮಸ್ಯೆಗೆ ಅಗತ್ಯವಿರುವ ಕಾಕ್ಲಿಯರ್ ಇಂಪ್ಲಾಂಟ್ ಎಂಬ ಚಿಕಿತ್ಸೆಗೆ ₹20 ಲಕ್ಷ ಬೇಕಾಗುತ್ತದೆ. ಆದರೆ ಸರ್ಕಾರದ ವತಿಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಚಿಕಿತ್ಸೆ ನೀಡಲಾಗುತ್ತದೆ. ಇದೇ ರೀತಿ ಸರ್ಕಾರದಿಂದ ವಿಶೇಷ ಚೇತನರಿಗೆ ಸಾಧನೆ-ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಒಲಂಪಿಕ್‌ನಲ್ಲಿ ವಿಶೇಷಚೇತನರು 29 ಪದಕ ಗೆಲ್ಲುವ ಮೂಲಕ ಭಾರತ 18ನೇ ಸ್ಥಾನದಲ್ಲಿರುವಂತೆ ಮಾಡಿರುವುದು ನಿಜಕ್ಕೂ ಸಾಧನೆ. ಅವರನ್ನು ನಾವು ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂದೆ ತರಬೇಕು. ವಿಕಲಚೇನತರು ಮತ್ತು ಕನ್ನಡಿಗರಾದ ಸುಹಾಸ್ ಯತಿರಾಜ್ ಉತ್ತರ ಪ್ರದೇಶದ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಪ್ಯಾರಾ ಒಲಂಪಿಕ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ತುಮಕೂರಿನವರಾದ ಅಂಧತ್ವ ಸಮಸ್ಯೆ ಇರುವ ಕೆಂಪಹೊನ್ನಯ್ಯ ಅವರು ಐಎಎಸ್ ಪಾಸ್ ಮಾಡಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಯಾಗಿದ್ದಾರೆ. ಹೀಗೆ ಅನೇಕ ವಿಶೇಷಚೇತನ ಸಾಧಕರು ನಮಗೆ ಮಾದರಿಯ ಆಗಿದ್ದಾರೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 21,694 ವಿಷೇಶಚೇತನರಿದ್ದು, ಇವರಿಗೆ ತ್ರಿಚಕ್ರ ವಾಹನ ಮತ್ತು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿಶೇಷಚೇತನರಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿದರು.ವಿಕಲಚೇತನರಿಗೆ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ವಿಕಲಚೇತನರ ಶ್ರೇಯೋಭಿವೃದ್ದಿದಾಗಿ ಶ್ರಮಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಕಲಚೇತನರ ಅಧಿಕಾರಿ ಸುವರ್ಣ ವಿ.ನಾಯಕ್ ಸ್ವಾಗತಿಸಿದರು. ವಿಕಲಚೇತನರ ಜಿಲ್ಲಾ ಅಧ್ಯಕ್ಷೆ ಯಶೋಧಾ ದೇವಿ, ಮಹಾನಗರಪಾಲಿಕೆ ಅಧಿಕಾರಿ ಅನುಪಮ ಇತರೆ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು