ಸಾರಾಂಶ
ರಾಮನಗರ: ನಿಮ್ಮ ನೋವು ನಲಿವುಗಳನ್ನು ನಂಬಿಕಸ್ತರಲ್ಲಿ ಹಂಚಿಕೊಳ್ಳಿ, ಉತ್ತಮ ಸ್ನೇಹಿತರ ಸಂಪರ್ಕದಲ್ಲಿ ಸದಾ ಇರುವ ಮೂಲಕ ಒಂಟಿತನದಿಂದ ಹೊರಬನ್ನಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್.ಸವಿತಾ ಹೇಳಿದರು.
ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ತರಬೇತಿ ಕೇಂದ್ರ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ತಂದೆ ತಾಯಿಗಳಿಗಿಂತ ಉತ್ತಮ ಸ್ನೇಹಿತರಿಲ್ಲ, ಅವರೊಂದಿಗೆ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ನಿಮ್ಮ ನೆರೆಹೊರೆಯವರಲ್ಲಿ ಆತ್ಮಹತ್ಯೆ ಅಲೋಚನೆಗಳು ಕಂಡುಬಂದರೆ ಮನೋರೋಗ ತಜ್ಞರನ್ನು ಭೇಟಿ ಮಾಡಲು ಸಲಹೆ ನೀಡಿ ಎಂದವರು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮನೋರೋಗ ತಜ್ಞರಾದ ಡಾ.ಬಿ.ಎಂ. ಶಿವಸ್ವಾಮಿ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ, ಖಿನ್ನತೆ, ಒಂಟಿತನ, ಕೌಟುಂಬಿಕ ಕಲಹಗಳಂತಹ ಕಾರಣಗಳು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ. ಹದಿಹರೆಯದವರು ಮೊಬೈಲ್ ವ್ಯಸನದಿಂದ ಹೊರಬಂದು ದೈಹಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿ ಆತ್ಮಹತ್ಯೆ ತಡೆಗಟ್ಟುವ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಕೆ.ಕುಮಾರ್ ಮಾತನಾಡಿ, ಆತ್ಮಹತ್ಯೆ ಅಲೋಚನೆಗಳು ಅಥವಾ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿಗೆ ಟೆಲಿಮಾನಸ್ ಶುಲ್ಕ ರಹಿತ ದೂ:14416 ಸಹಾಯವಾಣಿಗೆ ಕರೆಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ ಎಂದು ತಿಳಿಸಿದರು.
ಮನೋರೋಗ ತಜ್ಞರಾದ ಡಾ. ಆದರ್ಶ ಎ.ಎಂ.ಮಾತನಾಡಿ, ಪ್ರಪಂಚದಾದ್ಯಂತ ವರದಿಯಾಗುವ ಆತ್ಮಹತ್ಯೆಗಳಲ್ಲಿ ಶೇ. 15 ರಷ್ಟು ನಮ್ಮ ದೇಶದಲ್ಲಿ ಸಂಭವಿಸುತ್ತದೆ. 25 ಜನರು ಆತ್ಮಹತ್ಯೆ ಪ್ರಯತ್ನ ಮಾಡಿದರೆ ಒಬ್ಬರು ಸಾವನ್ನಪ್ಪುತ್ತಾರೆ. ಆದ್ದರಿಂದ ಆತ್ಮಹತ್ಯೆ ಪ್ರಯತ್ನ ಮಾಡುವವರ ಸಂಖ್ಯೆಯು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಗಿಂತ ಅತಿ ಹೆಚ್ಚು ವರದಿಯಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ, ಕ್ಲಿನಿಕಲ್ ಸೈಕಲಾಜಿಸ್ಟ್ ಸಿ.ಗೋವಿಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
11ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಪಿ.ಆರ್.ಸವಿತಾ ಉದ್ಘಾಟಿಸಿದರು.