ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಭ್ರಮೆಯಿಂದ ಹೊರಬನ್ನಿ

| Published : Mar 03 2025, 01:45 AM IST

ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಭ್ರಮೆಯಿಂದ ಹೊರಬನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಭ್ರಮೆಯಿಂದ ಹೊರಬನ್ನಿ

ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ದೊರಕುವುದಿಲ್ಲ ಎಂಬ ಭ್ರಮೆಯಲ್ಲಿ ನಾವಿಂದು ಇದ್ದೇವೆ. ಸಾವಿರಾರು ವರ್ಷಗಳಿಂದಲೂ ಕನ್ನಡ ಭಾಷಿಕರು ಉದ್ಯೋಗ ಮಾಡುತ್ತಲೇ ಬರುತ್ತಿದ್ದಾರೆ. 20ನೇ ಶತಮಾನದಲ್ಲಿ ಬದುಕಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿದ ವಿದ್ವಾಂಸರೆಲ್ಲ ಕನ್ನಡ ಮಾಧ್ಯಮದಲ್ಲಿಯೇ ಓದಿ ಬಂದವರು ಎಂಬುದನ್ನು ನಾವೆಲ್ಲಾ ನೆನಪಿನಲ್ಲಿಟ್ಟುಕೊಳ್ಳಬೇಕು. ಇಂತಹ ಕೀಳರಿಮೆಯ ಮನೋಭಾವವನ್ನು ಕನ್ನಡಿಗರು ಬಿಡಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.ಅವರು ತುಮಕೂರು ಬಳಿಯ ಕೋರಾ ಗ್ರಾಮದಲ್ಲಿ ಏರ್ಪಡಿಸಿದ್ದ ತುಮಕೂರು ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಲೇಖಕರು ಮುಕ್ತವಾಗಿ ಬರೆಯಲೂ, ಮಾತನಾಡಲೂ ಆಗದ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂದು ತರುಣ ಬರಹಗಾರರಿಗೆ ನೈತಿಕ ಸ್ಥೈರ್ಯವನ್ನು ತುಂಬುವಂತಹ ಸಾಹಿತಿಗಳ ಕೊರತೆ ಕಂಡುಬರುತ್ತಿದೆ ಎಂದರು. ಆದ್ದರಿಂದಲೇ ತರುಣ ಬರಹಗಾರರು ಆತ್ಮವಿಶ್ವಾಸದಿಂದ ಸುರಕ್ಷಿತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ. ಸಾಹಿತಿಯಾದವನು ಯಾವುದಕ್ಕೂ ಅಂಜದೆ ಅಳುಕದೆ ತನ್ನ ಚಿಂತನೆಗಳನ್ನು ಮುಕ್ತವಾಗಿ ಅಕ್ಷರ ರೂಪದಲ್ಲಿ ದಾಖಲಿಸಿ ಎಂದು ಕರೆ ನೀಡಿದರು. ಸಮ್ಮೇಳನಾಧ್ಯಕ್ಷ ಎಂ.ನಂಜಯ್ಯ ಮಾತನಾಡಿ ತುಮಕೂರು ತಾಲೂಕು ಸಾಹಿತ್ಯ ಮತ್ತು ಕಲೆಗಳ ತವರೂರಾಗಿದ್ದು ಇಲ್ಲಿನ ಪ್ರಾಚೀನ ಕಲೆಗಳೆಲ್ಲಾ ನಗರೀಕರಣದ ಪ್ರಭಾವಕ್ಕೆ ಒಳಗಾಗಿ ಆಧುನಿಕತೆಯ ಮೆರುಗನ್ನು ಪಡೆದುಕೊಂಡಿವೆ. ಈ ಭಾಗದ ಚಿಟ್ಟಿಮೇಳ, ವೀರಗಾಸೆ, ಮೆಳೇಹಳ್ಳಿಯ ನಾಟಕ ತಂಡಗಳು ಇನ್ನೂ ನಮ್ಮಲ್ಲಿ ಕಲೆಗಳು ಜೀವಂತವಾಗಿರುವುದನ್ನು ತೋರಿಸುತ್ತವೆ. ಕೋರಾ ಮಹಾನಾಡಪ್ರಭುಗಳ ಕೇಂದ್ರವಾಗಿ ಇತಿಹಾಸಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇಂದು ಈ ಊರಿನಲ್ಲಿ ಐತಿಹಾಸಿಕ ಕುರುಹುಗಳು ಒಂದೂ ಕಾಣುತ್ತಿಲ್ಲ. ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಿ ಅದಕ್ಕೆ ಒಂದು ವಸ್ತುಸಂಗ್ರಹಾಲಯವನ್ನು ನಿರ್ಮಿಸಿದರೆ ಭವಿಷ್ಯದ ಜನಾಂಗಕ್ಕೆ ನಮ್ಮ ಕಲಾ ಪರಂಪರೆಯನ್ನು ಕೊಂಡೊಯ್ಯಬಹುದು ಎಂದರು.

ತುಮಕೂರು ನಗರದ ಗಡಿಭಾಗದಲ್ಲಿ ಹಿಂದೆ ಗ್ರಾಮೀಣ ಜನ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಉಂಟಾಗಿದ್ದು, ಗ್ರಾಮಾಂತರ ಪ್ರದೇಶದ ಮಕ್ಕಳೆಲ್ಲಾ ನಗರದ ಇಂಗ್ಲೀಷ್ ಮಾಧ್ಯಮ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.

ಹಳ್ಳಿಗಾಡಿನ ಕನ್ನಡ ಶಾಲೆಗಳನ್ನು ಸದೃಢಗೊಳಿಸಬೇಕಾಗಿದೆ. ಮೂಕ ಪ್ರಾಣಿಗಳಂತೆ ದೇಹ ದಂಡಿಸುತ್ತಾ ಬಂದಿರುವ ಕೃಷಿಕನ ಬೆವರಿಗೆ ಬೆಲೆಯೇ ಇಲ್ಲದಂತಾಗಿದೆ. ತೋಟಗಾರಿಕೆ ಬೆಳೆಗಳು ರೋಗಪೀಡಿತವಾಗಿವೆ. ಇದಕ್ಕಿಂತಲೂ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ಕಂಗಲಾಗಿದ್ದಾನೆ ಎಂದರು.ನಿಕಟಪೂರ್ವ 6ನೇ ಸಮ್ಮೇಳನಾಧ್ಯಕ್ಷ ಪ್ರೊ. ಕೋ.ರಂ.ಬಸವರಾಜು ಧ್ವಜ ಹಸ್ತಾಂತರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಆಶಯ ನುಡಿಗಳನ್ನಾಡಿದರು. ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಸಿರಿವರ, ಅಪ್ಪಗೆರೆ ತಿಮ್ಮರಾಜು, ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ನರಸಿಂಹಮೂರ್ತಿ, ಚಿಕ್ಕಬೆಳ್ಳಾವಿ ಶಿವಕುಮಾರ್ ಹಾಜರಿದ್ದರು. ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಕೋ.ರಂ.ಬಸವರಾಜು ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ, ಡಾ. ಬಿ.ನಂಜುಂಡಸ್ವಾಮಿ ಯವರು ಸ್ಥಳೀಯ ಸಂಸ್ಕೃತಿ, ಶ್ವೇತಾರಾಣಿ ಶಿಕ್ಷಣ ನಗರದಿಂದ ಕೈಗಾರಿಕಾ ನಗರದತ್ತ ತುಮಕೂರು. ಡಾ. ಶಿವಣ್ಣ ಬೆಳವಾಡಿ ಜಾನಪದ ಕಲೆ ಮತ್ತು ಸಾಹಿತ್ಯದ ಮೇಲೆ ನಗರದ ಪ್ರಭಾವ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಡಾ. ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಆನಂತರ ಡಾ. ಲಕ್ಷ್ಮಣದಾಸ್ ಅಧ್ಯಕ್ಷತೆಯಲ್ಲಿ ರಂಗಭೂಮಿ ಕುರಿತ ಗೋಷ್ಠಿ ನಡೆಯಿತು. ಎಂ.ವಿ.ನಾಗಣ್ಣ ಪ್ರಬಂಧ ಮಂಡಿಸಿದರು. ಸುಗುಣಾದೇವಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕಮಲಾ ರಾಜೇಶ್ ಉದ್ಘಾಟಿಸಿದರು. 15 ಜನ ಕವಿಗಳು ಕವಿತೆ ವಾಚಿಸಿದರು. ಎಂ.ಜಿ.ಸಿದ್ಧರಾಮಯ್ಯನವರ ಗಮಕ ವ್ಯಾಖ್ಯಾನ ಕಾರ್ಯಕ್ರತಮ ನಡೆಸಿಕೊಟ್ಟರು.