ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾದ ಯುವ ಕವಿಗಳು

| Published : Mar 03 2025, 01:45 AM IST

ಸಾರಾಂಶ

ಯುವ ಕವಿಗೋಷ್ಠಿಯಲ್ಲಿ ಯುವ ಕವಿಗಳು ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾಗಿ ನೆರೆದವರ ಗಮನ ಸೆಳೆದರು.

ಬಿ.ರಾಮಪ್ರಸಾದ್ ಗಾಂಧಿ

ಕನ್ನಡಪ್ರಭ ವಾರ್ತೆ ಹಂಪಿ(ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ)

ನವಂಬರ್‌ಗೆ ಸೀಮಿತವಾದ ಕನ್ನಡ, ಮಾಡ್ರನ್‌ ತಾಯಿ, ಹಂಪಿ ವೈಭವ ಬಣ್ಣಿಸುವ ಕವನ, ಜಾತಿ ವ್ಯವಸ್ಥೆ, ಹೆಣ್ಣಿನ ತಲ್ಲಣ, ರೈತನ ಇಂದಿನ ಸ್ಥಿತಿ ಗತಿ, ಅಸ್ಪೃಶ್ಯತೆ, ಶಿಕ್ಷಣದ ಮಹತ್ವ, ನಿರುದ್ಯೋಗ...

ಹೀಗೆ ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ ಯುವ ಕವಿಗಳು ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾಗಿ ನೆರೆದವರ ಗಮನ ಸೆಳೆದರು.

ಕೌಸ್ತಭ ಭಾರದ್ವಾಜ್‌ ನವೆಂಬರ್‌ ಕನ್ನಡ ಎಂಬ ಕವನ ವಾಚಿಸಿ ಕನ್ನಡ ನುಡಿ ಬಗ್ಗೆ ಅಭಿಮಾನ ಕೇವಲ ನವೆಂಬರ್‌ಗೆ ಸೀಮಿತವಾಗಬಾರದು, ನಿತ್ಯ ಕನ್ನಡವಾಗಬೇಕು ಎಂಬುದನ್ನು ತಮ್ಮ ಕಾವ್ಯದಲ್ಲಿ ಹೇಳಿದರು.

ಲಕ್ಷ್ಮಣ ಮಂಡಲಗೇರಿ ಎಂಬ ಕವಿ ದೀಪ ಹಚ್ಚೋಣ ಬಾ ಗೆಳತಿ ಎಂಬ ಕವನ ವಾಚಿಸಿ ಜಾತಿ, ಧರ್ಮಗಳ ವಿರುದ್ಧ ಧ್ವನಿ ಎತ್ತಿದರು. ಭಾರತಿ ಮಲ್ಲಿಕಾರ್ಜುನಗೌಡ ಎಂಬ ಕವಿಯತ್ರಿ ಮಾಡ್ರನ್‌ ತಾಯಿ ಬಗ್ಗೆ ವಾಚಿಸಿದ ಕವನ ನನ್ನವ್ವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಎನ್‌. ಬಸವರಾಜ ಅವರು ಹಂಪಿ ವೈಭವ ಬಿಂಬಿಸುವ ಹೆಮ್ಮೆಯ ಹಂಪಿ ಕವನ ಸಹ ಹಂಪಿಯ ಇತಿಹಾಸ ತಿಳಿಸಿತು. ಟಿ.ಎಚ್‌.ಎಂ ಶೇಖರಯ್ಯ ಏನೇನ್ನಬೇಕು ಕವನ ಜಾತಿ ವ್ಯವಸ್ಥೆ ಕುರಿತು ಗಮನ ಸೆಳೆಯಿತು. ನಾಗಮಣಿಯವರ ಯಾಂತ್ರಿಕ ಜಗತ್ತಿನ ಸಾಂಪ್ರಾದಾಯಿಕ ಮಹಿಳೆ ಸಹ ಮೆಚ್ಚುಗೆಗೆ ಪಾತ್ರವಾಯಿತು.

ಗಂಡ ಹೆಂಡಿರು ಹೇಗೆ ಅನ್ಯೋನ್ಯ.ತೆ ಇರಬೇಕು ಎಂಬುದರ ಬಗ್ಗೆ ದಾಂಪತ್ಯ ಜೀವನ ಬ್ಯಾಂಕ್‌ ಇದ್ದಂತೆ ಎಂಬ ಕವನ ಉತ್ತಮವಾಗಿತ್ತು. ಬಿ.ಬಿ. ಶಿವಾನಂದರ ಕುರಿಮಂದೆ, ಮೆಹಬೂಬ್‌ ಮಠದ ರವರ ನನ್ನವ್ವ ಬೆವರುತ್ತಾಳೆ, ವೆಂಕಟೇಶ ಗೂಡೂರು ಅಭಿವೃದ್ದಿ ಅನ್ನದಾತ, ಅಮೀರ ಸಾಬ್‌ ಒಂಟಿ ಅವರ ಕೆಲಸ ಖಾಲಿ ಮುಂತಾದ ಕವನಗಳು ಪ್ರೇಕ್ಷಕರ ಗಮನಸೆಳೆದವು.

3 ತಾಸು ನಡೆದ ಯುವಕವಿಗೋಷ್ಠಿಯಲ್ಲಿ ಕೆಲವು ಕವನಗಳು ತುಂತುರು ಮಳೆಯಂತೆ ಇದ್ದರೆ, ಇನ್ನೂ ಕೆಲವು ಸಿಡಿಲಿನ ಗರ್ಜನೆಯಂತೆ ಮೊಳಗಿದವು. ಒಟ್ಟಿನಲ್ಲಿ ಯುವ ಕವಿಗಳು ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾದರು.

ಅಧ್ಯಕ್ಷತೆ ಡಾ. ಎಸ್. ಮಂಜುನಾಥ ವಹಿಸಿದ್ದರು. ನೋಡಲ್‌ ಅಧಿಕಾರಿ ನಾಗರಾಜ ಹವಾಲ್ದಾರ, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಇದ್ದರು.