ಹಸಿರು ದೀಪಾವಳಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ

| Published : Oct 15 2025, 02:06 AM IST

ಸಾರಾಂಶ

ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು, ಮುಂಬರುವ ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಹಸಿರು ದೀಪಾವಳಿ ಆಚರಣೆಗೆ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು, ಮುಂಬರುವ ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಹಸಿರು ದೀಪಾವಳಿ ಆಚರಣೆಗೆ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ದೀಪಾವಳಿ ಜಾತ್ರೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ವಲಯ ನಿಯಮಾವಳಿಗಳನ್ನು ಅನುಸರಿಸುವ ಸಂಬಂಧ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಜಿಲ್ಲಾಧಿಕಾರಿಯವರು ಮಾತನಾಡಿದರು.

ಅ. ೧೮ ರಿಂದ ೨೨ ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು ೩೦ ಸಾವಿರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕ್ಷೇತ್ರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ವಿಧದ ಪ್ಲಾಸ್ಟಿಕ್ ವಸ್ತುಗಳ ಬಳಕೆ, ವಿತರಣೆ ಅಥವಾ ಸಾಗಣೆ ಸಂಪೂರ್ಣ ನಿಷೇಧಿಸಿರುವ ಬಗ್ಗೆ ಪಾಲನೆ ಮಾಡಬೇಕು. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದರು.

ಮಲೆ ಮಹದೇಶ್ವರ ಬೆಟ್ಟ ಸಂಪರ್ಕಿಸುವ ಎಲ್ಲಾ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ತರಲು ಪ್ರಯತ್ನಿಸಿದರೆ ಅವುಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಹೀಗಾಗಿ ಸಾಕಷ್ಟು ಮುಂಚಿತವಾಗಿಯೇ ಭಕ್ತಾಧಿಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಿರುವ ಕುರಿತು ತಿಳಿವಳಿಕೆ ನೀಡಬೇಕಿದೆ. ಪ್ಲಾಸ್ಟಿಕ್ ಗೆ ಪರ್ಯಾಯ ವಸ್ತುಗಳನ್ನು ಉಪಯೋಗಿಸಬೇಕಿದ್ದು, ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರ ಪರ್ಯಾಯ ಪರಿಸರ ಸ್ನೇಹಿ ವಸ್ತುಗಳ ಮಾರಾಟಕ್ಕೆ ಮುಂದಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಕ್ಷೇತ್ರದಲ್ಲಿ ದಾನಿಗಳು ಆಹಾರ ಮತ್ತು ನೀರಿನ ವಿತರಣೆಗೆ ಕಾಗದದ ತಟ್ಟೆ, ಲೋಟದಂತಹ ಬಯೋ ಜೀವಸಂಯೋಜ್ಯ (ಡಿಗ್ರೇಡಬಲ್) ವಸ್ತುಗಳನ್ನೇ ಬಳಸಬೇಕು. ನೀರಿನ ವಿತರಣೆಗೆ ಮಾತ್ರ ೫ ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪುನರ್‌ಬಳಕೆಗೆ ಯೋಗ್ಯವಾದ ಬಾಟಲಿಗಳನ್ನು ಬಳಸಬಹುದು.

ಕ್ಷೇತ್ರದಲ್ಲಿ ಪರು ಮಾಡುವ (ಅಡುಗೆ) ಅನ್ನದಾನಿಗಳು ಕಡ್ಡಾಯವಾಗಿ ನೊಂದಣಿ ಮಾಡಿಸಿ ಪೂರ್ವಾನುಮತಿ ಪಡೆಯಬೇಕು. ದಾನಿಗಳು ವಿತರಣೆಯ ಬಳಿಕ ಉಂಟಾಗುವ ತ್ಯಾಜ್ಯವನ್ನು ಅವರೇ ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದರು.

ಹಣ್ಣು, ಕಬ್ಬಿನ ಹಾಲು ಮಾರಾಟಗಾರರು ಮತ್ತು ಇತರೆ ವ್ಯಾಪಾರಸ್ಥರು ತಮ್ಮ ವ್ಯಾಪಾರ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಮತ್ತು ತ್ಯಾಜ್ಯವನ್ನು ರಸ್ತೆಗಳ ಮೇಲೆ ಸುರಿಯದೆ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಜಾತ್ರಾ ಸಂದರ್ಭದಲ್ಲಿ ತಾಳಬೆಟ್ಟ, ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಸದಂತೆ ಮನವೊಲಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ವಿದ್ಯಾರ್ಥಿಗಳನ್ನು ನಿಯೋಜಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಚಟುವಟಿಕೆಗಳನ್ನು ಎನ್.ಎಸ್.ಎಸ್. ವಿದ್ಯಾರ್ಥಿಗಳು ನಡೆಸಲಿದ್ದಾರೆ.

ಭಕ್ತರು, ದಾನಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರು ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಸರ ಕಾಳಜಿಯಿಂದ ಹಸಿರು ದೀಪಾವಳಿ ಆಚರಿಸುವ ಮೂಲಕ ಕ್ಷೇತ್ರವನ್ನು ಸ್ವಚ್ಛ, ಪ್ಲಾಸ್ಟಿಕ್‌ಮುಕ್ತ ಮತ್ತು ಆಧ್ಯಾತ್ಮಿಕ ಪವಿತ್ರ ಕ್ಷೇತ್ರವಾಗಿ ಕಾಪಾಡಿಕೊಳ್ಳಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ ಮಾಡಿದರು.

ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಹನೂರು ತಹಶೀಲ್ದಾರರಾದ ಚೈತ್ರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಪರಿಸರ ಅಧಿಕಾರಿ ಸವಿತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಅಧಿಕಾರಿ ಡಾ. ಮಹೇಶ್, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಕಿರಣ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.