ಸಾರಾಂಶ
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸುಮಾರು ಎಂಟು ದಿನಗಳ ಕಾಲ ನಡೆಯುವ ಅವಧೂತ ಶುಖಮುನಿ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ ರವಿ ಅಂಗಡಿ ಸೂಚನೆ ನೀಡಿದರು.ಪಟ್ಟಣ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಜಾತ್ರಾ ಸೌಲಭ್ಯದ ಕುರಿತು ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕಿನ ದೋಟಿಹಾಳ ಗ್ರಾಮದ ಅವಧೂತ ಶುಖಮುನಿಸ್ವಾಮಿಗಳ ಜಾತ್ರಾ ಕಾರ್ಯಕ್ರಮವು ಮಾ.3ರಿಂದ ಮಾ.10ರವರೆಗೆ ನಡೆಯುತ್ತದೆ ಎಂದರು.ಜಾತ್ರಾ ಕಾರ್ಯಕ್ರಮದ ಅಂಗವಾಗಿ ಸುಮಾರು ಎಂಟು ದಿನಗಳ ಕಾಲ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯುತ್ತದೆ. ಮಾ.10ರಂದು ಮಹಾರಥೋತ್ಸವ ಜರುಗುತ್ತದೆ. ಪೊಲೀಸ್ ಅಧಿಕಾರಿಗಳು ಯಾವುದೇ ತರಹದ ಅಹಿತಕರ ಘಟನೆಗಳು ಜರುಗದಂತೆ ಹಾಗೂ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.ಸಾರಿಗೆಯ ಇಲಾಖೆಯವರು ಎಂಟು ದಿನಗಳ ಕಾಲ ಬಸ್ ಸೇವೆಯನ್ನು ಸಮರ್ಪಕವಾಗಿ ಒದಗಿಸಿಕೊಡಬೇಕು. ಜಾತ್ರೆಯ ದಿನದಂದು ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು. ಜಾತ್ರೆಗೆ ಬಂದಂತಹ ಭಕ್ತರಿಗೆ ಬಸ್ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.ದಾಸೋಹ ಸಮಿತಿಯವರು ಜಾತ್ರೆಯು ಮುಗಿಯುತನಕ ಬಂದಂತಹ ಭಕ್ತರಿಗೆ ಪ್ರಸಾದ ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಮಠದ ಕಮಿಟಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಮಠದ ಕಮಿಟಿಯವರು ಇದ್ದರು.