2ಎ ಮೀಸಲಾತಿಗೆ ಪಕ್ಷಾತೀತ ಹೋರಾಟಕ್ಕೆ ಸಿದ್ಧರಾಗಿ: ಜಯಮೃತ್ಯುಂಜಯ ಸ್ವಾಮೀಜಿ

| Published : Sep 16 2024, 01:46 AM IST

2ಎ ಮೀಸಲಾತಿಗೆ ಪಕ್ಷಾತೀತ ಹೋರಾಟಕ್ಕೆ ಸಿದ್ಧರಾಗಿ: ಜಯಮೃತ್ಯುಂಜಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರು ವಾಸವಿ ಕಲ್ಯಾಣ ಮಂಪಟದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅತ್ಯಂತ ಅಗತ್ಯವಾಗಿರುವದರಿಂದ ಪಕ್ಷಾತೀತವಾಗಿ ಹೋರಾಟ ಮಾಡಲು ಸಿದ್ಧರಾಗುವಂತೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಅಶೋಕಭವನದ ಬಳಿ ಕಿತ್ತೂರುರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಹಾಗೂ ಚೆನ್ನಮ್ಮ ವೃತ್ತದ ಉದ್ಘಾಟನೆ ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ಶಾಸಕರೇ 2ಎ ಮೀಸಲಾತಿ ಹೋರಾಟಕ್ಕೆ ನಮ್ಮನ್ನು ಕರೆಯಲು ಬರುತ್ತಿದ್ದರು. ಪ್ರಸ್ತುತ ಸರ್ಕಾರದಲ್ಲಿ ನಾನೇ ಹೋಗಿ ಶಾಸಕರನ್ನು ಕರೆಯಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜದ ಮುಂದಿನ ಪೀಳಿಗೆ ಹಿತದೃಷ್ಠಿಯಿಂದ ಜನ ಪ್ರತಿನಿಧಿಗಳು ಮತ್ತು ಮುಖಂಡರು ವೈಯಕ್ತಿಕ ಸ್ವಾರ್ಥ ಬದಿಗಿಟ್ಟು ರಾಜೀರಹಿತ ಚಳವಳಿಗೆ ಮುಂದಾಗಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಲಿಂಗಾಯತ ಸಮಾಜದ ಉಪಪಂಗಡಗಳು ಪ್ರತ್ಯೇಕವಾಗಿ ತಮ್ಮ ಸಮುದಾಯಗಳ ದಾರ್ಶನಿಕರನ್ನು ಗುರುತಿಸಿ ಸರ್ಕಾರದಿಂದ ಜಯಂತಿ ಆಚರಣೆ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದ ನಂತರ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ರಾಣಿ ಚನ್ನಮ್ಮ ಜಯಂತಿಯನ್ನು ಸಮಾಜದ ಒತ್ತಡದಿಂದ ಜಾರಿಗೆ ತರಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಲತಃ ವಕೀಲರಾಗಿರುವದರಿಂದ ಸೆ.22 ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಕರ್ನಾಟಕದ ವಕೀಲರಿಂದ 2ಎ ಮೀಸಲಾತಿಗೆ ಒತ್ತಾಯಿಸಿ ಮನವಿಪತ್ರ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವಕೀಲರು ಭಾಗವಹಿಸುವಂತೆ ತಿಳಿಸಿದರು. ಹಾವನೂರ ಆಯೋಗದ ವರದಿ ಆಧಾರದ ಮೇಲೆ ದಿ.ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಹಿಂದುಳಿದ ವರ್ಗದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಮಹತ್ಕಾರ್ಯ ಮಾಡಿದರು.

ಲಿಂಗಾಯತ ಸಮಾಜದ ಉಪಪಂಗಡಗಳಾದ ಕಂಬಾರ, ಕುಂಬಾರ, ಗಾಣಿಗ ಹೀಗೆ ಎಲ್ಲ ಕುಶಲ ಕರ್ಮಿಗಳಿಗೆ 2ಎ ಮೀಸಲಾತಿ ಕಲ್ಪಿಸಿದರು. ಆದರೆ ಲಿಂಗಾಯತರಿಗೆ ಭೂಮಿಯುಳ್ಳವರು, ಆರ್ಥಿಕವಾಗಿ ಸದೃಢರೆನ್ನುವ ಕಾರಣದಿಂದ ಮೀಸಲಾತಿ ಕೊಡದೆ ತಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.

ಮಾಜಿ ಸಂಸದ ಕರಡಿ ಸಂಗಣ್ಣ, ಸಮಾಜ ಒಗ್ಗಟ್ಟಿನಿಂದ ಹೋರಾಟಕ್ಕಿಳಿದರೆ ತಾವು ಸಹ ತನು-ಮನ-ಧನದಿಂದ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಮುಖಂಡ ಲಕ್ಷ್ಮಣ ನಿರಾಣಿ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಪಂಪನಗೌಡ ಮಾತನಾಡಿದರು. ವಿವಿಧ ಮಠಗಳ ಸ್ವಾಮೀಜಿಗಳು,ಸಮಾಜದ ಮುಖಂಡರು,ಜನಪ್ರತಿನಿಧಿಗಳು ಸೇರಿ ಅನೇಕರು ಇದ್ದರು.