ಸಾರಾಂಶ
500 ವರ್ಷಗಳ ನಿರಂತರ ಹೋರಾಟ, ಹಲವಾರು ಅಡೆತಡೆಗಳ ನಡುವೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಪ್ರತಿಯೊಬ್ಬ ಭಾರತೀಯ ರಾಮನ ಆದರ್ಶಗಳನ್ನು ತಾವು ಅಳವಡಿಸಿಕೊಂಡು ತಮ್ಮ ಸಂತತಿಯಲ್ಲಿ ಪ್ರತಿಷ್ಠಾಪಿಸುವುದು ಅಗತ್ಯವಾಗಿದೆ ಎಂದು ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
500 ವರ್ಷಗಳ ನಿರಂತರ ಹೋರಾಟ, ಹಲವಾರು ಅಡೆತಡೆಗಳ ನಡುವೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಪ್ರತಿಯೊಬ್ಬ ಭಾರತೀಯ ರಾಮನ ಆದರ್ಶಗಳನ್ನು ತಾವು ಅಳವಡಿಸಿಕೊಂಡು ತಮ್ಮ ಸಂತತಿಯಲ್ಲಿ ಪ್ರತಿಷ್ಠಾಪಿಸುವುದು ಅಗತ್ಯವಾಗಿದೆ ಎಂದು ಉಡುಪಿಯ ಪೇಜಾವರ (ಅಧೋಕ್ಷಜ) ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಹೇಳಿದರು.ನಗರದ ಶ್ರೀರಾಘವೇಂದ್ರ ಸಭಾ ಭವನದಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೂರ್ಯ, ಚಂದ್ರರು ಇರುವವರೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಉಳಿಯಬೇಕಾದರೆ ಹಿಂದುಗಳು ಹಿಂದುಗಳಾಗಿ ಉಳಿದರೆ ಮಾತ್ರ ಸಾಧ್ಯ. ಮನೆ, ಮಕ್ಕಳು ದಾರಿತಪ್ಪದಂತೆ ನಿಗಾವಹಿಸಿ. ರಾಮ ಮಂದಿರವಾಗಿದೆ, ಇನ್ನು ರಾಮರಾಜ್ಯವಾಗಬೇಕು. ರಾಮ ರಾಜ್ಯವಾಗಬೇಕಾದರೆ ಸ್ವಾರ್ಥ ಬಿಟ್ಟು ತ್ಯಾಗ ಮನೋಭಾವ ಬೆಳೆಸಿಕೊಂಡು ಪ್ರತಿಯೊಬ್ಬರು ರಾಮನ ಆದರ್ಶ ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ, ಸಮೀರವಾಡಿ ಗೋಧಾವರಿ ಬಯೋ ರಿಫೈನರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ವಿದ್ವಾನ್ ಯಜ್ಞವಲ್ಕ್ಯ, ಅಶೋಕ ಕುಲಕರ್ಣಿ ಸಾಂದರ್ಭಿಕವಾಗಿ ಮಾತನಾಡಿದರು.ವೇದಿಕೆ ಮೇಲೆ ಸ್ವಾಗತ ಸಮಿತಿ ಅಧ್ಯಕ್ಷ ಸೋನಪ್ಪಿ ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸದ್ಧರ್ಮ ಮಂಡಳದ ಅಧ್ಯಕ್ಷ ಪ್ರಲ್ಹಾದರಾವ ದೇಶಪಾಂಡೆ, ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ, ಋಷಿಕೇಶಾಚರ್ಯ ಜೋಷಿ, ಆನಂದ ಜೇರೆ ಉಪಸ್ಥಿತರಿದ್ದರು,
ಸಮಾರಂಭಕ್ಕೂ ಮುಂಚೆ ನಗರದ ವೆಂಕಟೇಶ ದೇವಾಲಯದಿಂದ ಶ್ರೀ ರಾಘವೇಂದ್ರ ಮಠದವರೆಗೆ ನಡೆದ ಶೋಭಾಯಾತ್ರೆಗೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು. ವೆಂಕಟೇಶ ನ್ಯಾಮಣ್ಣವರ, ಸಂಜೀವ ಮೊಕಾಸಿ ವೇದಘೋಷ ಮಾಡಿದರು, ಶೃದ್ಧಾ ಕಾಖಂಡಕಿ ಪ್ರಾರ್ಥಿಸಿದರು, ಸೋನಪ್ಪಿ ಕುಲಕರ್ಣಿ ಸ್ವಾಗತಿಸಿದರು. ಸುಬ್ಬಣ್ಣಾಚಾರ್ಯ ಮನಗೂಳಿ ನಿರೂಪಿಸಿದರು, ಗಿರೀಶ ಆನಿಖಿಂಡಿ ವಂದಿಸಿದರು.