ಸಾರಾಂಶ
ಬಿಜೆಪಿ ಬರೀ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ಧರ್ಮ-ಧರ್ಮ ಹಾಗೂ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಿದೆ.
ಧಾರವಾಡ:
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ತಾಲೂಕಿನ ಶಿವಳ್ಳಿ, ವನಹಳ್ಳಿ, ತಲವಾಯಿ, ಚಂದನಮಟ್ಟಿ, ಕನಕೂರ ಗ್ರಾಮಗಳ ಹನುಮಾನ ದೇವಸ್ಥಾನಗಳಿಗೆ ಭೇಟಿ ನೀಡಿ ಹನುಮ ಜಯಂತಿ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮಗಳ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪಾದಯಾತ್ರೆ ಮೂಲಕ ತೆರಳಿದ ಅಸೂಟಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಬರೀ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ಧರ್ಮ-ಧರ್ಮ ಹಾಗೂ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಿದೆ. ಸಾಮಾನ್ಯ ಜನರಿಗೆ ಇದು ಅರ್ಥವಾಗಬೇಕಿದೆ. ಕಾಂಗ್ರೆಸ್ ಸರ್ಕಾರ ಎಲ್ಲ ಸಮಾಜ, ಜನಾಂಗದವರನ್ನು ಸಮನಾಗಿ ನೋಡುತ್ತಾ, ಬಡವರಿಗೆ ಜೀವನಕ್ಕೆ ಆಧಾರವಾಗುವ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು ಎಂದ ಮನವಿ ಮಾಡಿದರು.ದೇಶದ ಭವಿಷ್ಯ ಬರೆಯುವ ಚುನಾವಣೆ ಇದು. ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ರೈತರ ಕಷ್ಟಗಳಿಗೆ ಕಿವಿಯಾಗದ, ರೈತರ ಆದಾಯ ಎರಡು ಪಟ್ಟು ಮಾಡದ, ಬರ ಪರಿಹಾರ ಕೊಡಲು ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ರೈತರ, ಬಡವರ ಕಷ್ಟಗಳಿಗೆ ಸ್ಪಂದಿಸುವ, ಹೃದಯಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ನೀಡಿ. ಈ ಬಾರಿ ಧಾರವಾಡದಲ್ಲಿ ಬದಲಾವಣೆ ಖಚಿತ. ಜೋಶಿಗೆ ಸೋಲು ನಿಶ್ಚಿತ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸೋಣ ಎಂದರು.
ಕಾಂಗ್ರೆಸ್ ಮುಖಂಡ ಈಶ್ವರ ಶಿವಳ್ಳಿ ಹಾಗೂ ಅರವಿಂದ ಏಗನಗೌಡರ ಮಾತನಾಡಿ, ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಜನತೆ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಸಹ ಮಾತು ನೀಡಿದಂತೆ ನಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ಅದರಲ್ಲೂ ವಿನೋದ ಅಸೂಟಿಯನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸಬೇಕೆಂದರು.ಈ ವೇಳೆ ಶಿವಲೀಲಾ ಕುಲಕರ್ಣಿ, ಗಿರಿಮಲ್ಲಯ್ಯ ನಂದಿಕೋಲಮಠ, ಸಿದ್ದಪ್ಪ ಪ್ಯಾಟಿ, ಬಸಣ್ಣ ಮಾಳಾಪೂರ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.