ಸಾರಾಂಶ
ರಾಸಾಯನಿಕ ಮಿಶ್ರಿತ ಪದಾರ್ಥಗಳಿಂದ ಮುಕ್ತವಾದರೆ ಆರೋಗ್ಯ ಮತ್ತು ದೇಶವನ್ನು ಕಾಪಾಡಿಕೊಳ್ಳಬಹುದು ಎಂದು ನೇರಡಗುಂಬ ಪಶ್ಚಿಮಾದ್ರಿ ಸಂಸ್ಥಾನ ಮಠದ ಪಂಚಮ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ನಾವು ದಿನನಿತ್ಯ ಸೇವಿಸುವ ಆಹಾರ ವಿದೇಶಿ ಮತ್ತು ರಾಸಾಯನಿಕ ಮಿಶ್ರಿತ ಪದಾರ್ಥಗಳಿಂದ ಮುಕ್ತವಾದರೆ ಆರೋಗ್ಯ ಮತ್ತು ದೇಶವನ್ನು ಕಾಪಾಡಿಕೊಳ್ಳಬಹುದು ಎಂದು ನೇರಡಗುಂಬ ಪಶ್ಚಿಮಾದ್ರಿ ಸಂಸ್ಥಾನ ಮಠದ ಪಂಚಮ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಸಮೀಪದ ಸೈದಾಪುರ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿದ ಸ್ವಾಭಿಮಾನ ಸ್ವದೇಶಿ ಕೇಂದ್ರ ಮತ್ತು ವಿವೇಕಾ ಗಾಣದ ಎಣ್ಣೆ ಘಟಕಕ್ಕೆ ಭೇಟಿ ನೀಡಿ ಬಳಿಕ ಅವರು ಮಾತನಾಡಿದರು.
ನಮ್ಮ ದೇಶ, ನಮ್ಮ ರೈತರು ಎಂದೆಲ್ಲ ಹೇಳುವ ನಾವುಗಳು ಇಂದು ವಿದೇಶಿ ವಸ್ತುಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ಚಪ್ಪಲಿ, ಬಟ್ಟೆ, ಬ್ಯಾಗ್‌ಗಳಿಂದ ಹಿಡಿದು, ಆಹಾರ, ತಂಪು ಪಾನೀಯಗಳವರೆಗೆ ನಾವೆಲ್ಲಾ ವಿದೇಶಿ ವಸ್ತುಗಳನ್ನು ಕೊಳ್ಳುವ ಹವ್ಯಾಸ ಮಾಡಿಕೊಂಡಿದ್ದೇವೆ ಎಂದರು.ಪ್ರತಿಯೊಬ್ಬ ಭಾರತೀಯನೂ ಈ ಪೆಪ್ಸಿ, ಕೋಲಾ, ಮಿರಿಂಡಾಗಳಂತಹ ವಿಷಕಾರಿ ಪಾನೀಯಗಳನ್ನು ಮತ್ತು ರಿಫೈನಡ್ ಅಡುಗೆ ಎಣ್ಣೆ ಬಳಸದೆ, ಎಳನೀರು, ಹಾಲು, ಮಜ್ಜಿಗೆ, ಲಸ್ಸಿ, ಕಬ್ಬಿನ ಹಾಲು, ತಾಜಾ ಹಣ್ಣು-ತರಕಾರಿ ಜ್ಯೂಸ್‌ಗಳನ್ನು ಹಾಗೂ ಸ್ವದೇಶಿ ಗಾಣದ ಎಣ್ಣೆ ಬಳಸಿದರೆ ನಮ್ಮ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುತ್ತದೆ. ನಮ್ಮ ಹಣ ನಮ್ಮ ದೇಶದಲ್ಲೇ ಉಳಿಯುವುದರ ಜೊತೆಗೆ ನಾವು ಆರೋಗ್ಯವಾಗಿರಬಹುದು ಎಂದರು.
ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಸುರೇಶ ಆನಂಪಲ್ಲಿ, ಬಸವಲಿಂಗಪ್ಪಗೌಡ ಐರೆಡ್ಡಿ ಕೂಡಲೂರು, ನೀಲಕಂಠಪ್ಪಗೌಡ ಕ್ಯಾತ್ನಾಳ್, ಸೂಗಪ್ಪ ಸಾಹುಕಾರ, ವಿಶ್ವನಾಥ ಬೆಟ್ಟಪ್ಪನೋರ್, ಅಂಜನೇಯ ಸೈದಾಪುರ, ಗುರುಮಠಕಲ್ ಬಿಜೆಪಿ ಮಂಡಲ ಕರ‍್ಯದರ್ಶಿ ಭೀಮಣ್ಣ ಮಡಿವಾಳಕರ್, ಮಲ್ಲಿಕಾರ್ಜುನ ಅರಿಕೇರಿಕರ್, ದೇವುಗೌಡ ಕೋಡಲ, ಸ್ವದೇಶಿ ಸ್ವಾಭಿಮಾನ ಕೇಂದ್ರದ ಸಂಚಾಲಕ ಅಂಜನೆಯ ವಡವಟ್ ಸೇರಿದಂತೆ ಇತರರಿದ್ದರು.