ಗುಲಾಮಗಿರಿ ಮನಸ್ಥಿತಿಯಿಂದ ಹೊರಬನ್ನಿ : ಮುಖ್ಯಮಂತ್ರಿ ಸಿದ್ದರಾಮಯ್ಯ

| N/A | Published : May 03 2025, 12:18 AM IST / Updated: May 03 2025, 12:58 PM IST

ಗುಲಾಮಗಿರಿ ಮನಸ್ಥಿತಿಯಿಂದ ಹೊರಬನ್ನಿ : ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಾಪದ ಕೆಲಸ ಮಾಡಿ ಒಳ್ಳೆಯದನ್ನು ಕೇಳಿದರೆ ಆಗೋಲ್ಲ, ಗುಲಾಮಗಿರಿ ಮನಸ್ಥಿತಿ ಕಿತ್ತುಹಾಕಿ ಮನುಷ್ಯರಾಗಬೇಕು.  

  ಶ್ರೀರಂಗಪಟ್ಟಣ : ಗುಲಾಮಗಿರಿ ಮನಸ್ಥಿತಿ ಕಿತ್ತಾಕುವವರೆಗೆ ಮನುಷ್ಯರಾಗಲು ಸಾಧ್ಯವಿಲ್ಲ, ಎಲ್ಲದಕ್ಕೂ ದೇವರ ಮೇಲೆ ಭಾರ ಹಾಕಿದರೆ ಪ್ರಯೋಜನವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಅಲ್ಲಾಪಟ್ಟಣದ ಗ್ರಾಮದಲ್ಲಿ ಅವರ ಮನೆದೇವರು ಶ್ರೀಅನ್ನದಾನೇಶ್ವರ (ಶ್ರೀ ಬೀರೇಶ್ವರ) ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಪದ ಕೆಲಸ ಮಾಡಿ ಒಳ್ಳೆಯದನ್ನು ಕೇಳಿದರೆ ಆಗೋಲ್ಲ, ಗುಲಾಮಗಿರಿ ಮನಸ್ಥಿತಿ ಕಿತ್ತುಹಾಕಿ ಮನುಷ್ಯರಾಗಬೇಕು. ನಾನು ಹೆಚ್ಚು ದೇವಸ್ಥಾನಕ್ಕೆ ಹೋಗುವುದಿಲ್ಲ. ಜನರ ಸೇವೆಯೇ ದೇವರು ಎಂದು ನಂಬುವವನು ನಾನು. ಒಳ್ಳೆಯದು ಮಾಡೋಕೆ ಆಗದಿದ್ದರೂ ಕೆಟ್ಟದ್ದನ್ನು ಮಾಡಬೇಡಿ. ನಾವೆಲ್ಲರೂ ಮನುಷ್ಯರು, ದ್ವೇಷ, ಜಾತಿ ಮಾಡುವ ಬದಲು ಎಲ್ಲರನ್ನೂ ಪರಸ್ಪರ ಪ್ರೀತಿಸಿ. ದೇವರ ಪೂಜೆಯನ್ನು ಮಾಡುವಾಗ ಭಕ್ತಿಯಿಂದ ಪೂಜೆ ಮಾಡಿ, ಜಾತಿ ವ್ಯವಸ್ಥೆಯಿಂದ ಅಸಮಾನತೆ ನಿರ್ಮಾಣ ಆಗಲಿದೆ. ಪೂರ್ವದಲ್ಲಿ ಶೂದ್ರರೆಲ್ಲರೂ ಅಕ್ಷರ, ಸಂಸ್ಕೃತಿಯಿಂದ ವಚಿಚಿತರಾಗಿದ್ದರು. ಸಂವಿಧಾನ ಬಂದ ನಂತರ ಎಲ್ಲರಿಗೂ ಶಿಕ್ಷಣದ ಹಕ್ಕು ಸಿಕ್ಕಿದೆ ಎಂದರು.

ನಾವೆಲ್ಲ ಸೇರಿ ಅಲ್ಲಾಪಟ್ಟಣದಲ್ಲಿ ಅನ್ನದಾನೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಅನ್ನದಾನೇಶ್ವರ ನಮ್ಮ ಮನೆಯ ಮೂಲ ದೇವರು. ಇಲ್ಲಿಂದ ಸಿದ್ದರಾಮೇಶ್ವರನ ಹೆಸರಲ್ಲಿ ತಾಯೂರಿನಲ್ಲಿ ನೆಲೆಸಿರುವ ಪ್ರತೀತಿ ಇದೆ. ಹಿಂದೆಲ್ಲ ತಾಯೂರಿನಲ್ಲಿ ಜಾತ್ರೆ ಮಾಡುತ್ತಿದ್ದೆವು. ಅಲ್ಲಿ ನಮ್ಮೂರಿನವರಿಗೂ ತಾಯೂರಿನವರಿಗೂ ಗಲಾಟೆ ಆಗಿ, ಅಲ್ಲಿಂದ ತಾಯೂರು ಬಿಟ್ಟು ನಮ್ಮೂರಿನಲ್ಲಿ ಸಿದ್ದರಾಮೇಶ್ವರ ಪೂಜೆ ಮಾಡುತ್ತಿದ್ದೇವೆ ಎಂದರು.

ಅಲ್ಲಾಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ ಎಂಬ ಜಾನಪದ ಹಾಡು ಹಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ನಮ್ಮೂರಲ್ಲಿ ತಾಯೂರು ಜಾತ್ರೆ ಅನ್ನುತ್ತಿದ್ದರು. ಇವಾಗ ಸಿದ್ದರಾಮನಹುಂಡಿ ಜಾತ್ರೆ ಎನ್ನುತ್ತೇವೆ. ಅಲ್ಲಿರುವ ಒಕ್ಕಲಿಗರು, ಕುರುಬರ ಹೆಸರೆಲ್ಲವೂ ಸಿದ್ದ, ರಾಮನ ಹೆಸರಿನಿಂದಲೇ ಆರಂಭವಾಗುತ್ತಿವೆ ಎಂದರು.

ಮನುಷ್ಯತ್ವದಿಂದ ನಡೆದುಕೊಂಡಾಗ ದೇವರಿಂದಲೂ ಸಹಾಯ ಸಿಗುತ್ತದೆ. ಜಾತಿ, ವರ್ಗರಹಿತ ಸಮಾಜ ನಿರ್ಮಾಣ ಆಗಬೇಕು ಆದರೆ, ಅದು ಇನ್ನು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ವರ್ಗಕ್ಕೆ ಚಲನೆ ಇದೆ, ಜಾತಿಗೆ ಚಲನೆ ಇಲ್ಲ. ಆರ್ಥಿಕ, ಸಾಮಾಜಿಕ ಶಕ್ತಿ ಕೊಡಬೇಕು. ಅದಕ್ಕಾಗಿ ಎಲ್ಲರೂ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ನಾಲ್ವಡಿಯವರು ಕೂಡ ಶಿಕ್ಷಣಕ್ಕೆ ಒತ್ತು ನೀಡಿ ಶಾಲೆಗಳನ್ನ ಕಟ್ಟಿದ್ದರು. ಹಿಂದೆಲ್ಲ ಜಾತಿ ನೋಡಿ ಮೆರಿಟ್ ಕೊಡುತ್ತಿದ್ದರು. ನಾನು ಹಣಕಾಸು ಮಂತ್ರಿ ಆದಾಗ ಕುರಿ ಲೆಕ್ಕ ಹಾಕೋಕೆ ಬರಲ್ಲ, ಬಜೆಟ್ ಮಂಡಿಸ್ತಾನ ಎಂದಿದ್ದರು. ವಿದ್ಯೆ ಯಾರಪ್ಪನ ಮನೆ ಸ್ವತ್ತಲ್ಲ. ಅದನ್ನ ಸವಾಲಾಗಿ ಸ್ವೀಕರಿಸಿ ಹಾಗಾಗಿಯೇ ೧೬ ಬಜೆಟ್ ಮಂಡಿಸಿದ್ದೇನೆ ಎಂದರು.

ಸಚಿವ ಎನ್.ಚಲುವರಾಯಸ್ವಾಮಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಕದಲೂರು ಉದಯ್, ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಇತರರು ಇದ್ದರು.

ದೇಗುಲ ಪ್ರತಿಷ್ಠಾಪನೆ ಹಿಂದೆ ಸಿಎಂ ಪತ್ನಿ ಪಾತ್ರ ಅಪಾರ: ಚಲುವರಾಯಸ್ವಾಮಿ

 ಶ್ರೀರಂಗಪಟ್ಟಣ : ಈ ದೇಗುಲ ಪುನರ್ ಪ್ರತಿಷ್ಠಾಪನಾ ಕಾರ್ಯದ ಹಿಂದೆ ಸಿಎಂ ಪತ್ನಿ ಪಾರ್ವತಮ್ಮ ಅವರ ಪಾತ್ರ ಅಪಾರ. ಸಿದ್ದರಾಮಯ್ಯ ಅವರ ಹಿಂದೆ ನಿಂತು ಸಾಕಷ್ಟು ಸೇವೆ, ತ್ಯಾಗ, ದಾನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕುಟುಂಬ ಈ ಸಮಾಜಕ್ಕೆ ಅನೇಕ ಸೇವೆ ಸಲ್ಲಿಸಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಅನೇಕರು ಟೀಕೆ ಮಾಡಿದ್ದರು, ಸಿಎಂ ಆದಾಗೆಲ್ಲ ಬರಗಾಲ, ಸಂಕಷ್ಟ ಎನ್ನುತ್ತಿದ್ದರು. ಕಳೆದ ವರ್ಷ ನಾಡಿನ ೩೧ ಜಿಲ್ಲೆಯಲ್ಲಿ ಯಾವುದೆ ಕೊರತೆ ಇಲ್ಲದಂತೆ ಸರ್ಕಾರ ಕೆಲಸ ಮಾಡಿದೆ. ೧೦-೨೦ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಹೆಚ್ಚು ಆಹಾರ ಉತ್ಪಾದನೆಯಾಗಿದೆ. ಈ ವರ್ಷ ಸಹ ಉತ್ತಮ ಆಹಾರ ಉತ್ಪಾದನೆಯಾಗಿದೆ ಎಂದರು.

ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗದಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರದ ಅಭಾವ ಎದುರಾಗದಂತೆ ಕ್ರಮ ವಹಿಸಲಾಗಿದೆ. ಇದು ಅವರಿಗೆ ರೈತರ ಮೇಲೆ ಇರುವ ಕಾಳಜಿಗೆ ಸಾಕ್ಷಿ. ಮಂಡ್ಯಕ್ಕೆ ಕೃಷಿ ಯೂನಿವರ್ಸಿಟಿ ಕೊಡಿಸುವಲ್ಲಿ ಸಿಎಂ ಪಾತ್ರ ಅಪಾರ. ಫ್ಯಾಕ್ಟರಿ ರೀ ಓಪನ್, ನಾಲೆ ಅಭಿವೃದ್ಧಿ ಸೇರಿ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದು ಸಿದ್ದರಾಮಯ್ಯ ಎಂದರು.

ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಬೇಡಿಕೆ ಇಟ್ಟರು. ತಾವು ಸಿಎಂ ಆದ ಬಳಿಕ ಎಲ್ಲವನ್ನೂ ಕೊಟ್ಟಿದ್ದೀರೀ. ೩೫ ಕೋಟಿ ವೆಚ್ಚದಲ್ಲಿ ೧೨ ಕೆರೆಗಳನ್ನ ತುಂಬಿಸಿಕೊಟ್ಟಿದ್ದೀರಿ. ಶ್ರೀರಂಗಪಟ್ಟಣ ಹಾಗೂ ನಾಲೆಗಳ ಮತ್ತಷ್ಟು ಅಭಿವೃದ್ಧಿಗೆ ೧೦೦ ಕೋಟಿ ರು. ಅನುದಾನ ನೀಡುವಂತೆ ಮನವಿ ಮಾಡಿದರು.