ಸಾರಾಂಶ
ಶಿರಸಿ- ಹುಬ್ಬಳ್ಳಿ, ಶಿರಸಿ- ಕುಮಟಾ, ಶಿರಸಿ-ಹಾವೇರಿ ರಸ್ತೆಯಲ್ಲಿ ಹೊಂಡಗಳಿಂದ ವಾಹನ ಸವಾರರು ಪರದಾಡುವಂತಾಗಿದೆ.
ಶಿರಸಿ: ಶಾಸಕರು ಜನಸ್ಪಂದನ ಸಭೆಯನ್ನು ನಡೆಸುವುದರ ಬದಲು ಸಮಸ್ಯೆಗಳು ಇರುವ ಸ್ಥಳಕ್ಕೆ ಅಧಿಕಾರಿಗಳ ಜತೆ ತೆರಳಿ, ಸಮಸ್ಯೆ ಬಗೆಹರಿಸಲಿ ಎಂದು ಜೆಡಿಎಸ್ ಜಿಲ್ಲಾ ಮುಖಂಡ ಉಪೇಂದ್ರ ಪೈ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿ- ಹುಬ್ಬಳ್ಳಿ, ಶಿರಸಿ- ಕುಮಟಾ, ಶಿರಸಿ-ಹಾವೇರಿ ರಸ್ತೆಯಲ್ಲಿ ಹೊಂಡಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ನಗರ ಭಾಗದ ರಸ್ತೆಗಳಲ್ಲಿ ಹೊಂಡಗಳಿಂದ ಆಟೋದವರು ಸಂಕಷ್ಟ ಎದುರಿಸುತ್ತಿದ್ದು, ಪಂಡಿತ ಸಾರ್ವಜನಿಕ ಆಸ್ಪತ್ರೆಯಿಂದ ಎಪಿಎಂಸಿ ಕ್ರಾಸ್‌ವರೆಗೆ ದ್ವಿಪಥ ರಸ್ತೆ ಕಾಮಗಾರಿ ಪಡೆದ ಗುತ್ತಿಗೆದಾರನಿಗೆ ಹಣ ಪಾವತಿಯಾದ ಕಾರಣ ರಸ್ತೆಯು ಅರ್ಧಂಬರ್ಧವಾಗಿದೆ. ಇದರಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಉಂಟಾಗುತ್ತಿದ್ದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಸ್ಥಳೀಯ ಶಾಸಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಸ್ಥಳೀಯ ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಜನಸ್ಪಂದನ, ಅಧಿಕಾರಿಗಳ ಸಭೆ ನಡೆಸಿ, ಕಾಲಹರಣ ಮಾಡುತ್ತಿದ್ದಾರೆ. ನಗರಸಭೆಯ ೩೧ನೇ ವಾರ್ಡಿನ ಸದಸ್ಯರನ್ನು ಕರೆದು ಜವಾಬ್ದಾರಿ ನೀಡಿದರೆ ಅಭಿವೃದ್ಧಿ ಜತೆಯಲ್ಲಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಯುವ ಘಟಕದ ಅಧ್ಯಕ್ಷ ಆದರ್ಶ ನಾಯ್ಕ ಮತ್ತಿತರರು ಇದ್ದರು.
ಸರ್ಕಾರ ದಿವಾಳಿ: ರಾಜ್ಯ ಸರ್ಕಾರ ದಿವಾಳಿಯಾಗಿದೆ. ಯಾವುದೇ ಕಾಮಗಾರಿಗಳಿಗೂ ಹಣವಿಲ್ಲ. ಈಗ ಕುಂಟುನೆಪ ಹೇಳುತ್ತ ಕಾಲಹರಣ ಮಾಡಲಾಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯೂ ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ ಎಂದು ಜೆಡಿಎಸ್ ಜಿಲ್ಲಾ ಮುಖಂಡ ಉಪೇಂದ್ರ ಪೈ ತಿಳಿಸಿದರು.