ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸಹಕಾರ ಕ್ಷೇತ್ರವು ಬಹಳ ದೊಡ್ಡದಾದ ಕ್ಷೇತ್ರವಾಗಿದೆ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ಸಹಕಾರದ ಘೋಷವಾಕ್ಯವಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ನುಡಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಬೀದರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬೀದರ್ ಮತ್ತು ಸಹಕಾರ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಬರುವ ಪಿಕೆಪಿಎಸ್ ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಡಿಸಿಸಿ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸಹಕಾರ ಯೂನಿಯನ್ ಇಂತಹ ತರಬೇತಿಗಳನ್ನು ನಡೆಸುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ನುರಿತ ಉಪನ್ಯಾಸಕರಿಂದ ಉಪನ್ಯಾಸ ಕೊಡಲಿದ್ದಾರೆ. ಸಾಲ ವಸೂಲಾತಿ ಕುರಿತು ತಿಳಿಸುತ್ತಾರೆ. ಸಾಲವನ್ನು ಯಾವ ರೀತಿ ವಸೂಲಿ ಮಾಡಬೇಕೆಂಬುದನ್ನು ತಿಳಿದುಕೊಂಡು ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಂಡು ಸಂಘ ಅಭಿವೃದ್ಧಿ ಪಥದತ್ತ ಕೊಂಡೊಯ್ಯಿರಿ ಎಂದು ತಿಳಿಸಿದರು.ಸಹಕಾರ ಸಂಘಗಳ ಉಪ ನಿಬಂಧಕರಾದ ಮಂಜುಳಾ ಎಸ್. ಮಾತನಾಡಿ, ತರಬೇತಿ ನೀಡುವ ಉದ್ದೇಶವೆಂದರೆ ಸಾಲ ವಸೂಲಾತಿ ಬಗ್ಗೆ ಪ್ರತಿಯೊಂದು ಸಹಕಾರ ಸಂಘ ದಿನನಿತ್ಯ ಮಾಡುವ ಕೆಲಸವಾಗಿದೆ. ಸಹಕಾರ ಕಾಯ್ದೆಯಲ್ಲಿ ಇತ್ತೀಚೆಗೆ ಬದಲಾವಣೆಯಾದ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಸಂಘದಲ್ಲಿಯೂ ಕೂಡ ಅಳವಡಿಸಿಕೊಂಡು ಮುನ್ನಡೆಸಿಕೊಂಡು ಹೋಗಬೇಕೆಂದರು.
ಸಂಘದಲ್ಲಿ ಹಣ ಎಲ್ಲಿ ಪೋಲಾಗಿದೆ ಎಂಬುದು ತಿಳಿದುಕೊಳ್ಳುವ ವಿಷಯ ಸಿಇಒಗಳದ್ದಾಗಿದೆ. ಸಹಕಾರ ಸಂಘಗಳ ಕಾಯಿದೆ ಪುಸ್ತಕಗಳನ್ನು ಓದಬೇಕು. ಕಾಲ ಕಾಲಕ್ಕೆ ಬದಲಾವಣೆಯಾದ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ತರಬೇತಿಯಲ್ಲಿ ನೀಡಿದ ಉಪನ್ಯಾಸವನ್ನು ಕಾರ್ಯರೂಪಕ್ಕೆ ತಂದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಇಂದಿನ ತರಬೇತಿಯು ಸಾರ್ಥಕವಾದಂತೆ ಎಂದು ತಿಳಿಸಿದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪರಮೇಶ್ವರ ಮುಗಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ನೀಡುವಂತಹ ತರಬೇತಿ ಪಡೆದುಕೊಂಡು ಅದನ್ನು ದಿನನಿತ್ಯ ಕೆಲಸದಲ್ಲಿ ಅಳವಡಿಸಕೊಂಡು ಹೋಗಿ ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಪವನ ರಾಠೋಡ, ಲೆಕ್ಕ ಪರಿಶೋಧನಾ ಇಲಾಖೆಯ ಜಗದೇವಿ, ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಗುಂಡಪ್ಪ ಹಣಮಂತಪ್ಪಾ, ಅಮೃತಪ್ಪ ಪಾರಾ, ಗುರುನಾಥಪ್ಪ ಎಖ್ಖೆಳ್ಳಿ, ಸೂರ್ಯಕಾಂತ ಸಂಗ್ರಾವiಪ್ಪ, ಸುಬ್ರಮಣ್ಯಂ ಪ್ರಭು ಮತ್ತು ಯೂನಿಯನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳು ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧಿಕಾರಿ ಎಚ್. ಆರ್. ಮಲ್ಲಮ್ಮ ನಿರೂಪಿಸಿದರು ಮಾರುತಿ ಕೆ. ವಂದಿಸಿದರು.