ಸಮೀಪದ ಹೊಸ ಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮರಣ ಹೊಂದಿದ ಸದಸ್ಯರಿಗೆ ತಲಾ 5 ಸಾವಿರ ಚೆಕ್ ವಿತರಿಸಿ
ಕನ್ನಡಪ್ರಭ ವಾರ್ತೆ ಭೇರ್ಯರೈತರು ಕೃಷಿ ಚಟುವಟಿಕೆಯ ನೆರವಿಗಾಗಿ ಸಹಕಾರ ಸಂಘಗಳ ಮೂಲಕ ನೀಡುವ ಸಾಲವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ರೈತರು ಖಾಸಗಿ ವ್ಯಕ್ತಿಗಳಲ್ಲಿ ಸಾಲ ಪಡೆಯುವುದು ತಪ್ಪಲಿದೆ ಎಂದು ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹವಾಲ್ದಾರ್ ರಾಜೇಗೌಡ ಹೇಳಿದರು.ಸಮೀಪದ ಹೊಸ ಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮರಣ ಹೊಂದಿದ ಸದಸ್ಯರಿಗೆ ತಲಾ 5 ಸಾವಿರ ಚೆಕ್ ವಿತರಿಸಿ ಮಾತನಾಡಿದರು.ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಂಘ ಆರ್ಥಿಕವಾಗಿ ಸದೃಢವಾಗಲಿದೆ. ಗ್ರಾಮದ ಇತರೇ ರೈತರಿಗೂ ಸಾಲ ಸೌಲಭ್ಯ ದೊರೆಯಲು ಸಹಕಾರಿಯಾಗಲಿದೆ. ಅಲ್ಲದೆ ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಕೃಷಿ ಪತ್ತಿನ ಸಹಕಾರ ಸಂಘಗಳು ಇತರೆ ಬ್ಯಾಂಕಿಂಗ್‌ವ್ಯವಸ್ಥೆಗಿಂತಲೂ ರೈತರಿಗೆ ಹತ್ತಿರ ಇರುವ ಸಂಸ್ಥೆಯಾಗಿದೆ. ಆಡಳಿತ ಮಂಡಳಿಗೆ ಎಲ್ಲರೂ ರೈತರೇ ಆಯ್ಕೆ ಆಗುವುದರಿಂದ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.2025-26ನೇ ಸಾಲಿನಲ್ಲಿ 670 ರೈತರಿಗೆ ಕೆಸಿಸಿ ಬೆಳೆ ಸಾಲವಾಗಿ 8.38 ಕೋಟಿ ರೂ. ಸಾಲ ನೀಡಿದ್ದು, ಶೇ. 99 ರಷ್ಟು ವಸೂಲಾತಿ ಕೂಡ ಮಾಡಲಾಗಿದೆ. ನೂತನವಾಗಿ 35 ಹೊಸ ಸದಸ್ಯ ರೈತರಿಗೆ 30 ಲಕ್ಷ ರೂ. ಬೆಳೆ ಸಾಲವನ್ನು ಈ ಬಾರಿ ಕೊಡಲಾಗಿದೆ ಎಂದು ಹೇಳಿದರು.ಇನ್ನೂ 63 ರೈತ ಸದಸ್ಯರಿಗೆ 1.23 ಕೋಟಿ ರೂ. ಮಧ್ಯಮಾವಧಿ ಮತ್ತು ಕೃಷಿ ಪಂಪ್ ಸೆಟ್ ಸಾಲ ನೀಡಿದ್ದು ಕಂತುಗಳ ಮೂಲಕ ವಸೂಲಿಯಾಗುತ್ತಿದೆ. ಅಲ್ಲದೆ ಎಂಟು ಸ್ತ್ರೀಶಕ್ತಿ ಮಹಿಳಾ ಸಂಘಗಳಿಗೆ 70 ಲಕ್ಷ ರೂ. ಸಾಲ ನೀಡಿದ್ದು ಎಲ್ಲರೂ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸಾಲ ಮರು ಪಾವತಿಸುತ್ತಿದ್ದಾರೆ. ಇದರ ಜೊತೆಗೆ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಇತ್ತೀಚೆಗೆ ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಸಾಲಪಡೆದ ಇಬ್ಬರು ರೈತರಾದ ಹರಂಬಳ್ಳಿ ಗ್ರಾಮದ ಅಣ್ಣೇಗೌಡ ಹಾಗೂ ಹರಂಬಳ್ಳಿಕೊಪ್ಪಲು ಗ್ರಾಮದ ಜವರೇಗೌಡ ಅವರು ಮರಣ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರೊಂದಿಗೆ ಅವರ ಮನೆ ಬಾಗಿಲಿಗೆ ಹೋಗಿ ಮರಣ ಹೊಂದಿದ ರೈತರ ಪತ್ನಿಯರಿಗೆ ಮರಣ ನಿಧಿ ತಲಾ 5 ಸಾವಿರ ಚೆಕ್ ನೀಡಲಾಗಿದೆ ಎಂದು ಅವರು ಹೇಳಿದರು.ಆಡಳಿತ ಮಂಡಳಿ ಉಪಾಧ್ಯಕ್ಷೆ ಇ.ಆರ್. ಕವಿತಾ, ನಿರ್ದೇಶಕರಾದ ಜವರೇಗೌಡ, ರಾಮೇಗೌಡ, ನಾರಾಯಣ ನಾಯಕ, ಕೃಷ್ಣೆಗೌಡ ಹಾಗೂ ಸಂಘದ ಸಿಇಒ ಜಿ.ಎಸ್. ಮನೋಜ್, ಗ್ರಾಮಸ್ಥರಾದ ಸಂತೋಷ್, ಅಪ್ಪಾಜಿಗೌಡ ಇದ್ದರು.