ಹಾನಗಲ್ಲ ತಾಲೂಕಿನಲ್ಲಿ ಕೊರತೆಗಳ ಮಧ್ಯೆಯೇ ಶಾಲಾರಂಭಕ್ಕೆ ಸಿದ್ಧತೆ

| Published : May 24 2024, 12:48 AM IST

ಹಾನಗಲ್ಲ ತಾಲೂಕಿನಲ್ಲಿ ಕೊರತೆಗಳ ಮಧ್ಯೆಯೇ ಶಾಲಾರಂಭಕ್ಕೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಶೈಕ್ಷಣಿಕ ವರ್ಷದ ಸಂಭ್ರಮದ ಶುಭಾರಂಭಕ್ಕೆ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯಾಪ್ತಿಯ ಎಲ್ಲ ಗುರುವೃಂದ, ಅಧಿಕಾರಿ ಗಣ ಸಿದ್ಧವಾಗಿದ್ದು ೪೩೭೫೦ ವಿದ್ಯಾರ್ಥಿಗಳು ಈ ಬಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹೊಸ ಶೈಕ್ಷಣಿಕ ವರ್ಷದ ಸಂಭ್ರಮದ ಶುಭಾರಂಭಕ್ಕೆ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯಾಪ್ತಿಯ ಎಲ್ಲ ಗುರುವೃಂದ, ಅಧಿಕಾರಿ ಗಣ ಸಿದ್ಧವಾಗಿದ್ದು ೪೩೭೫೦ ವಿದ್ಯಾರ್ಥಿಗಳು ಈ ಬಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಶಿಕ್ಷಕರು, ಕಟ್ಟಡ, ಶೌಚಾಲಯ ಸೇರಿದಂತೆ ಹಲವು ಕೊರತೆಗಳೂ ಕೂಡ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸವಾಲುಗಳಾಗಿವೆ.ಕಳೆದ ವರ್ಷ ೪೫ ಸಾವಿರ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರವೇಶ ಪಡೆದಿದ್ದರು. ಒಂದು ಮಾಹಿತಿಯಂತೆ ಮಕ್ಕಳ ಪ್ರವೇಶದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಈ ಬಾರಿ ೪೩೭೫೦ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ೨೨೭ ಸರಕಾರಿ ಪ್ರಾಥಮಿಕ ಶಾಲೆಗಳಿಗಾಗಿ ೧೨೧೨ ಶಿಕ್ಷಕರ ಮಂಜೂರು ಹುದ್ದೆಗಳು ಇಲ್ಲಿದ್ದರೂ ಕೂಡ ಈಗಿರುವ ಶಿಕ್ಷಕರು ಮಾತ್ರ ೮೮೬ ಮಾತ್ರ. ೨೯ ಸರಕಾರಿ ಪ್ರೌಢ ಶಾಲೆಗಳಲ್ಲಿ ೨೫೯ ಶಿಕ್ಷಕರ ಮಂಜೂರಿ ಹುದ್ದೆಗಳಿವೆ. ಆದರೆ ೫೦ಕ್ಕೂ ಅಧಿಕ ಶಿಕ್ಷಕರ ಕೊರತೆ ಇದೆ. ಇದಕ್ಕೆಲ್ಲ ಅತಿಥಿ ಶಿಕ್ಷಕರನ್ನೇ ಅವಲಂಬಿಸುವ ಅನಿವಾರ‍್ಯತೆ ಶಿಕ್ಷಣ ಇಲಾಖೆಗೆ ಇದೆ. ಈ ನಡುವೆ ಅನುದಾನಿತ ೯, ಅನುದಾನ ರಹಿತ ೩೬ ಪ್ರಾಥಮಿಕ ಶಾಲೆಗಳು, ಅನುದಾನಿತ ೧೯, ಅನುದಾನ ರಹಿತ ೧೦ ಪ್ರೌಢ ಶಾಲೆಗಳು ಈ ತಾಲೂಕಿನಲ್ಲಿವೆ.ಈಗಿರುವ ೧೨೬೬ ಶಾಲಾ ಕಟ್ಟಡಗಳಲ್ಲಿ ೧೧೦ ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿವೆ. ೧೨೦ ಕೊಠಡಿ ನೆಲಸಮ ಮಾಡಬೇಕಾಗಿದೆ. ಸದ್ಯಕ್ಕೆ ನೂರು ಹೊಸ ಕಟ್ಟಡಗಳಾದರೂ ಬೇಕು. ಅದಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಸಾಗರವಳ್ಳಿ, ಕತ್ರಿಕೊಪ್ಪ, ಹುನಗನಹಳ್ಳಿ, ವರ್ದಿ ಮುಂತಾದ ಶಾಲೆಗಳು ಸೋರುತ್ತಿವೆ. ಮಳೆ ಬಂದಾಗ ದೇವಸ್ಥಾನಗಳನ್ನು ಹುಡುಕಿಕೊಂಡು ಹೋಗಿ ಪಾಠ ಮಾಡುವ ಪರಿಸ್ಥಿತಿಯೂ ಇದೆ. ತಾಲೂಕಿನಲ್ಲಿ ಬಹಳಷ್ಟು ಶಾಲೆಗಳ ಶೌಚಾಲಯಗಳು ದುರಸ್ತಿಯಲ್ಲಿವೆ. ಹೊಸ ಶೌಚಾಲಯಗಳು ಬೇಕೇ ಬೇಕಾದ ಪರಿಸ್ಥಿತಿ ಇದೆ. ಇನ್ನು ಬಹುತೇಕ ಶಾಲೆಗಳಿಗೆ ಅದರಲ್ಲೂ ವಿಶೇಷವಾಗಿ ಪ್ರೌಢಶಾಲೆಗಳಿಗೆ ವಿಜ್ಞಾನ ಉಪಕರಣಗಳ ದೊಡ್ಡ ಕೊರತೆ ಇದೆ.ಕಳೆದ ಬಾರಿಯ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೋರಿದ, ದುರಸ್ತಿಗೆ ಬಂದ ಅಂದಾಜು ೧೧೬ ಶಾಲಾ ಕೊಠಡಿಗಳ ದುರಸ್ತಿಗೆ ಪ್ರಕೃತಿ ವಿಕೋಪದಡಿಯಲ್ಲಿ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ಯಾವುದೇ ದುರಸ್ತಿ ಸಾಧ್ಯವಾಗಿಲ್ಲ.ಶೇ. ೫೦ರಷ್ಟು ಪಠ್ಯ ಪುಸ್ತಕಗಳು ಬಂದಿವೆ. ಸರಕಾರಿ ಶಾಲೆಯ ಎಲ್ಲ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರಗಳ ಸರಬರಾಜು ಆಗಿದೆ. ಅವುಗಳ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ.ಕಳೆದ ಡಿಸೆಂಬರ್‌ನಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕೇವಲ ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿ, ಒಬ್ಬರು ಮ್ಯಾನೇಜರ್, ಒಬ್ಬರು ಅಧೀಕ್ಷಕರು, ಒಬ್ಬರು ಎಫ್‌ಡಿಎ, ಒಬ್ಬರು ಎಸ್‌ಡಿಎ ಸೇರಿ ಕೇವಲ ೫ ನೌಕರರು ಮಾತ್ರ ಇಡೀ ಕಚೇರಿಯ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಈಗಲೂ ಒಬ್ಬರು ಅಧೀಕ್ಷಕರು, ಮೂವರು ಸಿಇಓ, ಮೂವರು ಎಫ್‌ಡಿಎ, ಒಬ್ಬರು ಎಸ್‌ಡಿಎ, ಮೂವರು ಸಿಪಾಯಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಅತಿ ದೊಡ್ಡ ತಾಲೂಕಾದ ಹಾನಗಲ್ಲಿಗೆ ಇನ್ನೂ ಅಧಿಕ್ಷಕರು, ದೈಹಿಕ ಪರಿವೀಕ್ಷಕರು, ಸಿಇಓ, ಎಸ್‌ಡಿಎ, ವಾಹನ ಚಾಲಕರ ತೀರ ಅವಶ್ಯಕತೆ ಇದೆ.ದೊಡ್ಡ ತಾಲೂಕು, ದೊಡ್ಡ ದೊಡ್ಡ ಸಮಸ್ಯೆಗಳಿಂದ ಶೈಕ್ಷಣಿಕ ಹಿತಕ್ಕೆ ಅನಾನುಕೂಲ ತಪ್ಪಿಸಲು ಸರಕಾರ ಮುಖ್ಯವಾಗಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಒದಗಿಸಬೇಕಾಗಿದೆ.ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಅತ್ಯುನ್ನತ ಮಟ್ಟದಲ್ಲಿ ತರುವ ಯೋಜನೆ ರೂಪಿಸಲಾಗಿದೆ. ಶಿಕ್ಷಕರ ಕೊರತೆ ಇದ್ದರೂ ಅತಿಥಿ ಶಿಕ್ಷಕರಿಂದ ಅದನ್ನು ಭರಿಸಲಾಗುತ್ತದೆ. ಕಟ್ಟಡದ ವಿಷಯದಲ್ಲಿ ಕೆಲವು ತೊಂದರೆ ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲಿ ಇಲ್ಲ. ಹೊಸ ಶೈಕ್ಷಣಿಕ ವರ್ಷವನ್ನು ಅರ್ಥಪೂರ್ಣ ಶೈಕ್ಷಣಿಕ ವರ್ಷವನ್ನಾಗಿಸಲು ಸಜ್ಜುಗೊಂಡಿದ್ದೇವೆ. ಪಾಲಕರೂ ಕೂಡ ಮಕ್ಕಳ ಬಗೆಗೆ ಕಾಳಜಿ ವಹಿಸುವ ಅಗತ್ಯವಿದೆ. ಬಾಲಕ, ಪಾಲಕ, ಶಿಕ್ಷಕರ ಒಟ್ಟು ಪ್ರಯತ್ನದಿಂದ ಒಳ್ಳೆಯ ಫಲಿತಾಂಶ ಸಾಧ್ಯ ಎಂದು ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು.ಅದ್ಧೂರಿ ಶಾಲಾರಂಭಕ್ಕೆ ಸಿದ್ಧತೆಯನ್ನೂ ತಾಲೂಕಿನಾದ್ಯಂತ ಮಾಡಲಾಗಿದೆ. ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚುತ್ತಿದೆ. ಶೈಕ್ಷಣಿಕ ಗುಣಮಟ್ಟವನ್ನೂ ಇನ್ನೂ ಹೆಚ್ಚಿಸಬೇಕಿದೆ. ಸರಕಾರದ ಸೌಲಭ್ಯ, ಶಿಕ್ಷಕರ ಪರಿಶ್ರಮ, ಪಾಲಕರ ಕಾಳಜಿಯಿಂದ ಮಕ್ಕಳ ಶಿಕ್ಷಣ ಉತ್ತಮವಾಗಲು ಸಾಧ್ಯ. ಈ ಬಾರಿ ಇನ್ನೂ ಹೆಚ್ಚು ಪರಿಶ್ರಮದಿಂದ ನಮ್ಮ ಶಿಕ್ಷಕ ಬಳಗ ಶೈಕ್ಷಣಿಕ ಪ್ರಗತಿಗೆ ಉತ್ಸುಕವಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಪಾಟೀಲ ಹೇಳಿದರು.