ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ಕಂದಾಯ ನಿಗದಿ ವಿರೋಧಿಸಿ ಗೆಜ್ಜಲಗೆರೆ ಗ್ರಾಮಸ್ಥರು ನಗರಸಭೆ ಕಚೇರಿ ಎದುರು ಸೋಮವಾರ ಕಂದಾಯ ನಿಗದಿ ಕರಪತ್ರಗಳನ್ನು ಸುಟ್ಟು ಕರ ನಿರಾಕರಣೆ ಚಳವಳಿ ನಡೆಸಿದರು.

ಗ್ರಾಮದಿಂದ ನಗರಕ್ಕೆ ರೈತ ಪರ ಹೋರಾಟರಾದ ಸುನಂದ ಜಯರಾಮು ನೇತೃತ್ವದಲ್ಲಿ ತೆರಳಿದ ಪ್ರತಿಭಟನಾಕಾರರು ನಗರಸಭೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುನಂದ ಜಯರಾಂ ಮಾತನಾಡಿ, ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವುದರ ವಿರುದ್ಧ ನಾವು 100ಕ್ಕೂ ಹೆಚ್ಚು ದಿನಗಳಿಂದ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೇ, ಈ ವಿಷಯ ನ್ಯಾಯಾಲಯಲ್ಲಿದ್ದರೂ ನಗರಸಭೆಯಿಂದ ನಮ್ಮ ಗ್ರಾಮವನ್ನು ಒಳಪಟ್ಟಂತೆ ಹೊರಡಿಸಿರುವ ಕರ ವಸೂಲಾತಿ ಕ್ರಮವನ್ನು ಗ್ರಾಮಸ್ಥೆರೆಲ್ಲರೂ ಒಗ್ಗಟ್ಟಿನಿಂದ ಖಂಡಿಸಿ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದರು.

ಯಾವುದೇ ರೀತಿಯ ಕರ ವಸೂಲಾತಿಗಾಗಿ ನಗರಸಭೆ ಸಿಬ್ಬಂದಿ ಗೆಜ್ಜಲಗೆರೆ ಗ್ರಾಮಕ್ಕೆ ಬರುವಂತಿಲ್ಲ. ನಗರಸಭೆಗೆ ಗೆಜ್ಜಲಗೆರೆ ಗ್ರಾಮಸ್ಥರು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸೂಚನಾ ಫಲಕ ಅಳವಡಿಸಲಾಗುವುದು. ನಗರಸಭೆ ಸಿಬ್ಬಂದಿಗೆ ಗ್ರಾಮದೊಳಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದರು.


ಕಾನೂನು ಬಾಹಿರವಾಗಿ ನಗರಸಭೆಯಿಂದ ಹೊರಡಿಸಿರುವ ಕರ ನಿಗದಿ ಕ್ರಮವನ್ನು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ವಾಪಸ್ ಪಡೆಯಬೇಕು ಹಾಗೂ ಗೆಜ್ಜಲಗೆರೆ ಗ್ರಾಮವನ್ನು ಗ್ರಾಮವನ್ನಾಗಿಯೇ ಉಳಿಸಬೇಕು ನಗರಸಭೆಗೆ ಸೇರಿಸಬಾರದು ಎಂದು ಆಗ್ರಹಿಸಿ ನಗರಸಭೆ ಕಚೇರಿ ವ್ಯವಸ್ಥಾಪಕ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲಿಂಗಾಪ್ಪಾಜಿ, ಜಿ.ಎ.ಶಂಕರ್, ಮುಖಂಡರಾದ ಆತ್ಮಾನಂದ, ಲೋಕೇಶ್, ಶಾಂತಮ್ಮ, ಹೊನ್ನಮ್ಮ, ಪ್ರಭಾವತಿ, ಶಿವನಂಜು, ಪುಟ್ಟಸ್ವಾಮಿ, ಚಂದ್ರಶೇಖರ್, ಮಾಜಿ ಯೋಧ ಹೊನ್ನಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.