ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಮುಖ ರಾಸುಗಳ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಶ್ರೀ ಕ್ಷೇತ್ರ ಸಂಪೂರ್ಣ ಸಜ್ಜುಗೊಂಡಿದೆ. ನಾಳೆಯಿಂದ ದನಗಳ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಲಿದೆ.
ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಮುಖ ರಾಸುಗಳ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಶ್ರೀ ಕ್ಷೇತ್ರ ಸಂಪೂರ್ಣ ಸಜ್ಜುಗೊಂಡಿದೆ. ನಾಳೆಯಿಂದ ದನಗಳ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಲಿದೆ.
ಈ ಬಾರಿಯ ಜಾತ್ರೆ ಡಿ.10ರಿಂದ 18ರವರೆಗೆ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಎಲ್ಲ ಸಿದ್ದತೆಗಳು ನಡೆದಿವೆ. ಜಾತ್ರೆ ಸೇರುವ ಮೈದಾನದಲ್ಲಿ ರಾಸುಗಳ ಮಾಲೀಕರು ಈಗಾಗಲೇ ಆಕರ್ಷಕ ಮಂಟಪಗಳನ್ನು ನಿರ್ಮಿಸಿದ್ದಾರೆ.ವಿಖ್ಯಾತ ದನಗಳ ಜಾತ್ರೆ:
ಘಾಟಿ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಮುಖವಾದ ಜಾತ್ರೆಯಾಗಿದೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬೆಂಗಳೂರು ಸುತ್ತಮುತ್ತಲ ಅನೇಕ ಪ್ರದೇಶಗಳು, ಉತ್ತರ ಕರ್ನಾಟಕದ ಅನೇಕ ಭಾಗಗಳು, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಸೇರಿದಂತೆ ಅನೇಕ ಕಡೆಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.ಯಾಂತ್ರಿಕ ಕೃಷಿ ನಡುವೆಯೂ ಭರಾಟೆ:
ಕಳೆದ ಕೆಲ ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ಗಣನೀಯವಾಗಿ ಯಂತ್ರಗಳ ಬಳಕೆ, ಯಾಂತ್ರಿಕ ಕೃಷಿಯ ಸಾರ್ವತ್ರೀಕರಣದ ಹಿನ್ನಲೆಯಲ್ಲಿ ದನಗಳನ್ನು ಸಾಕಿ ಬೆಳೆಸುವ ಪ್ರಕ್ರಿಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಆದಾಗ್ಯೂ ಘಾಟಿ ಜಾತ್ರೆಯ ಸಂಭ್ರಮ ತಗ್ಗಿಲ್ಲ. ಪ್ರತಿವರ್ಷ ಕನಿಷ್ಠ 10ರಿಂದ 20 ಸಾವಿರಕ್ಕೂ ಹೆಚ್ಚು ರಾಸುಗಳು ಈ ಜಾತ್ರೆಯಲ್ಲಿ ಸೇರುತ್ತವೆ. ಕೋಟ್ಯಂತರ ರೂಪಾಯಿ ವಹಿವಾಟು ಇಲ್ಲಿ ನಡೆಯುತ್ತದೆ.ಉತ್ತಮ ರಾಸುಗಳಿಗೆ ಬಹುಮಾನ:
ಜಾತ್ರೆಯಲ್ಲಿ ನೊಂದಣಿ ಮಾಡಿಕೊಂಡು ಪಾಲ್ಗೊಂಡ ರಾಸುಗಳ ಪೈಕಿ ಅತ್ಯಂತ ಉತ್ತಮ ರಾಸುಗಳನ್ನು ಗುರ್ತಿಸಿ ಬಹುಮಾನಗಳನ್ನು ನೀಡುವ ಪ್ರಕ್ರಿಯೆಯೂ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಘಾಟಿ ದನಗಳ ಜಾತ್ರೆ ನೋಡಲು ಬರುವವರ ಸಂಖ್ಯೆ ದೊಡ್ಡದು. ಅದೇ ರೀತಿ ರಾಸುಗಳನ್ನು ಮಾರಲು ಮತ್ತು ಕೊಳ್ಳಲು ಬರುವ ರೈತರ ಸಂಖ್ಯೆಯೂ ಗಣನೀಯ. ಜಾತ್ರೆಗೆ ಆಗಮಿಸುವ ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ.ಜಿಲ್ಲಾಧಿಕಾರಿಗಳಿಂದ ಪರಿಶೀಲನೆ:
ಘಾಟಿ ದನಗಳ ಜಾತ್ರೆ ಹಿನ್ನಲೆಯಲ್ಲಿ ಭಾನುವಾರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಪಂ ಸಿಇಒ ಡಾ.ಅನುರಾಧ ಮತ್ತಿತರ ಹಿರಿಯ ಅಧಿಕಾರಿಗಳು ದನಗಳ ಜಾತ್ರೆ ನಡೆಯುವ ಸ್ಥಳ ಪರಿಶೀಲನೆ ನಡೆಸಿದರು. ಜಾತ್ರೆಯಲ್ಲಿ ಮೂಲಸೌಕರ್ಯಗಳಿಗೆ ಕೊರತೆಯಾಗದಂತೆ ವಹಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.ದೇಗುಲದಲ್ಲಿ ಡಿ.25ರಂದು ನಡೆಯುವ ಬ್ರಹ್ಮರಥೋತ್ಸವ ಕಾರ್ಯಕ್ರಮದ ಸಿದ್ದತೆಗಳ ಕುರಿತೂ ಅವರು ಮಾಹಿತಿ ಪಡೆದರು. ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಮಲ್ಲಪ್ಪ ಮತ್ತಿತರರು ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ಈ ಸಂಧರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
7ಕೆಡಿಬಿಪಿ1-ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಸಿದ್ದಗೊಂಡಿರುವ ಅಲಂಕೃತ ಮಂಟಪಗಳು.--
7ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಸಂಭ್ರಮದ ಸಿದ್ದತೆ.--
7ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ದನಗಳ ಜಾತ್ರೆ ಅಂಗವಾಗಿ ಮೂಗುದಾರ ಸೇರಿದಂತೆ ವಿವಿಧ ಪರಿಕರಗಳ ಮಾರಾಟ ಭರಾಟೆ.--
7ಕೆಡಿಬಿಪಿ4- ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಹಿನ್ನಲೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ.--
7ಕೆಡಿಬಿಪಿ5- ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸಭೆ ನಡೆಸಿದರು.