ಸಂಭ್ರಮದ ಘಟ್ಟಗಿ ಬಸವೇಶ್ವರ ಜಾತ್ರೆ

| Published : Nov 20 2023, 12:45 AM IST

ಸಾರಾಂಶ

ರಾತ್ರಿ ಜರುಗಿದ ರಥೋತ್ಸವದಲ್ಲಿ ಕರಡಿಮಜಲು ಸೇರಿದಂತೆ ವಿವಿಧ ವಾಧ್ಯಗಳ ವಾದನಗಳೊಡನೆ ರಬಕವಿ ಅಗಸಿಯಿಂದ ಆರಂಭಗೊಂಡ ರಥೋತ್ಸವ ಢಪಲಾಪುರ ಕಿರಾಣಿ ಅಂಗಡಿ ಮಾರ್ಗವಾಗಿ ಬಲಕ್ಕೆ ಸಾಗಿ ಶ್ರೀ ಶಂಕರಲಿಂಗ ದೇವಸ್ಥಾನ ಸರ್ಕಲ್‌ವರೆಗೆ ಸಾಗಿತು. ಶ್ರೀರಥಕ್ಕೆ ದೀಪಗಳ ಅಲಂಕಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೨೦೦ ವರ್ಷಗಳ ಹಿರಿಮೆ ಹೊಂದಿರುವ ರಬಕವಿಯ ಶ್ರೀಘಟ್ಟಗಿ ಬಸವೇಶ್ವರ ರಥೋತ್ಸವ ಕಡೆ ಪಾಡ್ಯಮಿಯ ದಿನದಂದು ರಾತ್ರಿ ಸಕಲ ಮಂಗಲವಾದ್ಯಗಳೊಡನೆ ಅತ್ಯಂತ ವೈಭವದಿಂದ ಜರುಗಿತು.

ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿ ಎರಡು ಶತಮಾನಗಳ ಐತಿಹಾಸಿಕ ಹಿನ್ನೆಲೆಯ ಜಾಗೃತ ಕ್ಷೇತ್ರವಾಗಿರುವ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನವು ಇಂದು ಸಕಲ ಸೌಕರ್ಯಗಳಿಂದ ಎಲ್ಲಾ ಸಮುದಾಯಗಳ ಜನರ ಮಂಗಲ ಕಾರ್ಯಗಳಿಗೆ ಅವಕಾಶ ಕಲ್ಪಿಸಿದೆ. ಎರಡು ಶತಮಾನಗಳ ಕಾಲ ಈ ಭಾಗದ ಜನರಲ್ಲಿ ಧಾರ್ಮಿಕ, ಶೈಕ್ಷಣಿಕ ಪ್ರಗತಿಗೆ ಗುರುತರ ಕಾಣಿಕೆ ನೀಡಿದೆ. ದ್ವಿಶತಮಾನದ ರಥೋತ್ಸವವು ಲಕ್ಷಾಂತರ ಭಕ್ತರ ಪಾಲಿಗೆ ಮರೆಯಲಾಗದ ಸುಸಂದರ್ಭವಾಗಿದ್ದು, ಮಾನವೀಯತೆ, ಸಮಾನತೆ ಮತ್ತು ಕಾಯಕ ತತ್ವದ ಮಹತ್ತತೆ ಸಾರಿದ ಬಸವಾದಿ ಪ್ರಮಥರ ಸಂದೇಶ ಎಲ್ಲರ ಮನೆ-ಮನಗಳಲ್ಲಿ ನಿತ್ಯ ನಿರಂತರವಾಗಿರಲಿ ಎಂದು ಆಶೀರ್ವದಿಸಿದರು.

ರಾತ್ರಿ ಜರುಗಿದ ರಥೋತ್ಸವದಲ್ಲಿ ಕರಡಿಮಜಲು ಸೇರಿದಂತೆ ವಿವಿಧ ವಾಧ್ಯಗಳ ವಾದನಗಳೊಡನೆ ರಬಕವಿ ಅಗಸಿಯಿಂದ ಆರಂಭಗೊಂಡ ರಥೋತ್ಸವ ಢಪಲಾಪುರ ಕಿರಾಣಿ ಅಂಗಡಿ ಮಾರ್ಗವಾಗಿ ಬಲಕ್ಕೆ ಸಾಗಿ ಶ್ರೀ ಶಂಕರಲಿಂಗ ದೇವಸ್ಥಾನ ಸರ್ಕಲ್‌ವರೆಗೆ ಸಾಗಿತು. ಶ್ರೀರಥಕ್ಕೆ ದೀಪಗಳ ಅಲಂಕಾರ ಮಾಡಲಾಗಿತ್ತು. ಭಕ್ತರು ತಮ್ಮ ಹರಕೆಯ ಅನುಸಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಲಕ್ಷಾಂತರ ಭಕ್ತರು ಶ್ರೀರಥದ ದರ್ಶನ ಪಡೆದು, ದೇಗುಲದಲ್ಲಿನ ಶ್ರೀ ಬಸವೇಶ್ವರ ದರ್ಶನ ಪಡೆದು ಪುನೀತರಾದರು.