ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ ವಿರೋಧಿಸಿ ಅ.30 ರಂದು ಅಂಬಾಮಠ ಗ್ರಾಮಕ್ಕೆ ಬರುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶೇಖರಪ್ಪ ಧುಮತಿ ವಕೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ ವಿರೋಧಿಸಿ ಅ.30 ರಂದು ಅಂಬಾಮಠ ಗ್ರಾಮಕ್ಕೆ ಬರುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶೇಖರಪ್ಪ ಧುಮತಿ ವಕೀಲ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ.18 ರಂದು ಸಂಜೆ 6 ಗಂಟೆಗೆ ತಿಡಿಗೋಳ ಗ್ರಾಮದ ಮಾರುತೇಶ್ವರ ಜಾತ್ರೆಯ ರಥೋತ್ಸವದಲ್ಲಿ ದಲಿತ ಸಮಾಜದ ಹುಸೇನಪ್ಪ, ಹೊಳಿಯಪ್ಪ, ದುರುಗೇಶ, ನಾಗರಾಜ ಮತ್ತಿತರ ಯುವಕರು ಕುಣಿಯುತ್ತಿದ್ದರು. ಆಗ ಸವರ್ಣೀಯರು ತಡೆಗಟ್ಟಿ ಬಹಿರಂಗವಾಗಿ ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿದ್ದಾರೆ. ಆದರೆ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಯರಿಯಪ್ಪ ಹಲ್ಲೆ ಮಾಡಿಲ್ಲವೆಂದು ವರದಿ ನೀಡಿದ್ದಾರೆ. ದಲಿತರ ಮೇಲೆಯೇ ಸುಳ್ಳು ಕೌಂಟರ್ ಕೇಸ್ ದಾಖಲಿಸಿದ್ದಾರೆ. ಘಟನೆ ನಡೆದು 9 ದಿನಗಳು ಕಳೆದಿದ್ದರೂ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ, ಜಿಲ್ಲಾಧಿಕಾರಿ, ಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ದೌರ್ಜನ್ಯ ಎಸಗಿದ ಕಿಡಿಗೇಡಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ದಲಿತರ ಮೇಲೆ ದಾಖಲಿಸಿರುವ ಸುಳ್ಳು ಕೇಸ್ ರದ್ದುಪಡಿಸಬೇಕು. ಪಿಎಸ್ಐ ಯರಿಯಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಸಾಮಾಜಿಕ ಬಹಿಷ್ಕಾರ ಹಾಕಿದವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕು. ಹಲ್ಲೆ ಎಸಗಿದವರಲ್ಲಿ 20 ಜನ ರೌಡಿಶೀಟರ್ಗಳು ಇದ್ದು, ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಬೇಕು. 15 ಎಕರೆ ಸರ್ಕಾರಿ ಜಾಗವನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಅ.30 ರಂದು ಅಂಬಾಮಠಕ್ಕೆ ಬರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಘೇರಾವ್ ಮಾಡಲಾಗುವುದು. ಜೊತೆಗೆ ನ. 8 ರಂದು ಸುಮಾರು 10 ಸಾವಿರ ಜನರೊಂದಿಗೆ ಸಿಂಧನೂರಿನಿಂದ ತಿಡಿಗೋಳ ಗ್ರಾಮಕ್ಕೆ ಚಲೋ ಚಳವಳಿ ನಡೆಸಿ, ಮಾರುತೇಶ್ವರ ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳ ಪ್ರವೇಶ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಚ್.ಪೂಜಾರ್, ಚಂದ್ರಶೇಖರ ಗೊರಬಾಳ, ಬಾಷುಮಿಯಾ, ಸಾಲೋಮನ್ ವಕೀಲ, ವೆಂಕಟೇಶ ಗಿರಿಜಾಲಿ, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ಎಸ್.ದೇವೇಂದ್ರಗೌಡ, ನಿರುಪಾದಿ ವಕೀಲ, ಬಸವರಾಜ ಬಾದರ್ಲಿ, ಬಸವರಾಜ ತಿಡಿಗೋಳ, ಬಸವರಾಜ ಕೊಂಡಿ, ಹುಸೇನಪ್ಪ ತಿಡಿಗೋಡಿ, ಶಶಿಧರ್ ಮತ್ತಿತರರು ಇದ್ದರು.